ಬೆಂಗಳೂರು, ಜು18(Daijiworld News/SS): ಒಂದೇ ದಿನದಲ್ಲಿ ವಿಶ್ವಾಸ ಮತಯಾಚನೆ ಮುಗಿಸುವುದು ಸಾಧ್ಯವಾಗದ ಮಾತು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನಸಭೆಯಲ್ಲಿ ಹೇಳಿದ್ದಾರೆ.
ವಿಶ್ವಾಸ ಮತಯಾಚನೆ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪ ಅವರು ಆತುರದಲ್ಲಿದ್ದಾರೆ. ನಮ್ಮದು ಲೂಟಿ ಮಾಡುವ ಸರ್ಕಾರವಲ್ಲ. ನಾನು ಹಾಗೂ ನಮ್ಮ ಸಂಪುಟದ ಮಂತ್ರಿಗಳು ಮಾನ, ಮರ್ಯಾದೆ ಇಟ್ಟುಕೊಂಡು ಬದುಕಿದ್ದೇವೆ. ಮೊದಲು ಚರ್ಚೆ ನಡೆಯಲಿ. ಚರ್ಚೆ ನಡೆಸದೇ ವಿಶ್ವಾಸಮತ ಯಾಚನೆ ಸಾಧ್ಯವೇ..? ಎಂದು ಪ್ರಶ್ನಿಸಿದ್ದಾರೆ.
ಒಂದೇ ದಿನದಲ್ಲಿ ವಿಶ್ವಾಸ ಮತಯಾಚನೆ ಮುಗಿಸುವುದು ಸಾಧ್ಯವಾಗದ ಮಾತು. ಈ ಹಿಂದೆ ಒಂದೇ ದಿನದಲ್ಲಿ ಅಥವಾ ಒಂದೇ ಗಂಟೆಯಲ್ಲಿ ವಿಶ್ವಾಸ ಮತಯಾಚನೆ ಮಂಡನೆ ಮಾಡಿರಬಹುದು. ಆದರೆ ಅಂದಿನ ಬೆಳವಣಿಗೆ ಬೇರೆ, ಇಂದಿನ ಬೆಳವಣಿಗೆ ಬೇರೆ. ಸ್ಪೀಕರ್ ಬಗ್ಗೆಯೂ ಅವಿಶ್ವಾಸದ ವಾತಾವರಣ ನಿರ್ಮಿಸಿದ್ದಾರೆ. ಇದರ ಬಗ್ಗೆ ಚರ್ಚೆ ನಡೆಯಲಿ ಎಂದು ಹೇಳಿದ್ದಾರೆ.
ಐಎಂಎ ಪ್ರಕರಣ, ಜಿಂದಾಲ್ ಪ್ರಕರಣದ ಬಗ್ಗೆಯೂ ನಾನು ಸತ್ಯವನ್ನು ಜನರ ಮುಂದೆ ಇಡಬೇಕಾಗಿದೆ. ಬರಗಾಲ, ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಬೇಕು ಹೀಗಾಗಿ ಚರ್ಚೆ ನಡೆಸಲು ಸಮಯಾವಕಾಶ ನೀಡಬೇಕು. ಇಂದಿನ ರಾಜಕೀಯ ಪರಿಸ್ಥಿತಿ ಬಗ್ಗೆ ಜನರು ಚರ್ಚಿಸುತ್ತಿದ್ದಾರೆ. ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗದಂತೆ ನಾವು ಕಲಾಪದಲ್ಲಿ ಚರ್ಚೆ ನಡೆಸಬೇಕಾಗಿದೆ ಎಂದು ಸದನದಲ್ಲಿ ವಿನಂತಿಸಿದ್ದಾರೆ.
ಕಳೆದ 14 ತಿಂಗಳಿಂದ ಭದ್ರವಾದ ಸರ್ಕಾರವನ್ನು ಅಸ್ಥಿರಗೊಳಿಸುತ್ತಿರುವವರು ಯಾರು ಎಂಬ ಚರ್ಚೆ ನಡೆಯಬೇಕು ಎಂದು ಸಿಎಂ ಒತ್ತಾಯಿಸಿದ್ದಾರೆ.