ಮುಂಬೈ,ಜ. 17 (DaijiworldNews/AK): 2017 ರಲ್ಲಿ ಭೀಕರ ರೈಲು ಅಪಘಾತಕ್ಕೆ ಒಳಗಾದರೂ ಸೂರಜ್ ತಿವಾರಿ 2023 ರಲ್ಲಿ ತಮ್ಮ ಜೀವನದ ಸವಾಲುಗಳನ್ನು ನಿವಾರಿಸಿ ಕಷ್ಟಕರವಾದ UPSC ನಾಗರಿಕ ಸೇವೆಗಳ ಪರೀಕ್ಷೆಯನ್ನು ತೇರ್ಗಡೆಯಾದರು. ಅವರ ಯಶಸ್ಸಿನ ಕಥೆ ಇಲ್ಲಿದೆ.

2017 ರಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ ಸೂರಜ್ ತನ್ನ ಎರಡೂ ಕಾಲುಗಳನ್ನು ಮೊಣಕಾಲಿನ ಕೆಳಗೆ, ಬಲಗೈ ಮತ್ತು ಎಡಗೈಯ ಎರಡು ಬೆರಳುಗಳನ್ನು ಕಳೆದುಕೊಂಡರು. ಆದರೂ, ಎಲ್ಲಾ ಕಷ್ಟಕರವಾದ ಜೀವನವನ್ನು ಮೆಟ್ಟಿ ನಿಂತು ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 917 ರ್ಯಾಂಕ್ ಗಳಿಸಿದರು.
ಸೂರಜ್ ಮನೆಯಲ್ಲಿಯೇ ತಯಾರಿಯನ್ನು ಪ್ರಾರಂಭಿಸಿದರು, ತರಬೇತಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ಕಾರಣ ಸ್ವಯಂ ಅಧ್ಯಯನವನ್ನು ಮಾತ್ರ ಅವಲಂಬಿಸಿದ್ದರು. ಮೊದಲ ಪ್ರಯತ್ನದಲ್ಲೇ ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದನ್ನು ಅವರು ಪಾಸು ಮಾಡಿದಾಗ ಅವರ ಅವಿರತ ಪ್ರಯತ್ನ ಫಲ ನೀಡಿತು. 2017 ರಲ್ಲಿ ನೋಯ್ಡಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸೂರಜ್, ಮೈನ್ಪುರಿಯಲ್ಲಿರುವ ತಮ್ಮ ಮನೆಗೆ ಭೇಟಿ ನೀಡುತ್ತಿದ್ದಾಗ ರೈಲು ಅಪಘಾತಕ್ಕೀಡಾದರು. ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸಿದರು.
ಅಪಘಾತದೊಂದಿಗೆ ನನ್ನ ಜೀವನ ಕೊನೆಗೊಳ್ಳುವುದಿಲ್ಲ ಎಂದುಕೊಂಡ ಸೂರಜ್. ಜೆಎನ್ಯುಗೆ ದಾಖಲಾಗಲು ನಿರ್ಧರಿಸಿದರು. ಅಲ್ಲಿ ರಷ್ಯನ್ ಭಾಷೆಯಲ್ಲಿ ಎಂಎ ಓದಿದರು. ತನಗಿರುವ ಸಂಕಷ್ಟಗಳ ನಡುವೆ ಸೂರಜ್ ಚಿಕಿತ್ಸೆ ಪಡೆಯುತ್ತಿದ್ದಾಗ ಸಹೋದರ ಆತ್ಮಹತ್ಯೆ ಮಾಡಿಕೊಂಡರು. ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಸೂರಜ್ ಅವರ ತಂದೆ ರಾಜೇಶ್ ತಿವಾರಿ ಭರಿಸಿದ್ದರು, ಅವರು ದರ್ಜಿ ಕೆಲಸ ಮಾಡುತ್ತಿದ್ದರು. ಪ್ರಸ್ತುತ ಸೂರಜ್ ಒಬ್ಬ ಸರ್ಕಾರಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ತಮ್ಮ ಕಥೆಯ ಮೂಲಕ ಇತರರಿಗೆ ಸ್ಫೂರ್ತಿ ಮತ್ತು ಪ್ರೇರಣೆ ನೀಡುತ್ತಿದ್ದಾರೆ.