ಪಣಜಿ, ಜ.17 (DaijiworldNews/TA): ಗೋವಾದಲ್ಲಿ ನಡೆದ ಭೀಕರ ಜೋಡಿ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ರಷ್ಯಾದ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಹಿಳಾ ಸ್ನೇಹಿತೆಯರ ಕತ್ತು ಸೀಳಿ ಹತ್ಯೆಗೈದಿರುವುದು ಪತ್ತೆಯಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಗೋವಾದ ಮೊರ್ಜಿಮ್ ಮತ್ತು ಅರಾಂಬೋಲ್ ಗ್ರಾಮಗಳಲ್ಲಿ ವಾಸವಾಗಿದ್ದ ರಷ್ಯನ್ ನಾಗರಿಕರಾದ ಎಲೆನಾ ವನೀವಾ (37) ಮತ್ತು ಎಲೆನಾ ಕಸ್ತನೋವಾ (37) ಅವರನ್ನು ಅಲೆಕ್ಸಿ ಲಿಯೊನೊವ್ ಎಂಬಾತ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಮಾಹಿತಿಯಂತೆ, ಜನವರಿ 14ರಂದು ಮೊರ್ಜಿಮ್ನಲ್ಲಿ ವಾಸವಾಗಿದ್ದ ಸ್ನೇಹಿತೆ ಎಲೆನಾ ವನೀವಾ ಅವರ ಕತ್ತನ್ನು ಸೀಳಿ ಆರೋಪಿ ಹತ್ಯೆಗೈದಿದ್ದಾನೆ.
ಇದಾದ ನಂತರ ಜನವರಿ 15ರಂದು, ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿರುವ ಅರಾಂಬೋಲ್ ಗ್ರಾಮಕ್ಕೆ ತೆರಳಿದ ಲಿಯೊನೊವ್, ಮತ್ತೊಬ್ಬ ಸ್ನೇಹಿತೆ ಎಲೆನಾ ಕಸ್ತನೋವಾ ಅವರನ್ನು ಭೇಟಿಯಾಗಿ, ಆಕೆಯನ್ನು ಹಗ್ಗದಿಂದ ಕಟ್ಟಿ ಕತ್ತು ಸೀಳಿ ಕೊಂದಿದ್ದಾನೆ. ಎರಡೂ ಮಹಿಳೆಯರ ಶವಗಳು ಶುಕ್ರವಾರ (ಜನವರಿ 16) ಪತ್ತೆಯಾಗಿವೆ. ವನೀವಾ ವಾಸವಾಗಿದ್ದ ಮನೆಯ ಮಾಲೀಕರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು, ಜೋಡಿ ಕೊಲೆಗಳ ಹಿಂದಿನ ಉದ್ದೇಶ ಹಾಗೂ ಹಿನ್ನೆಲೆಯ ಕುರಿತು ಆಳವಾದ ತನಿಖೆ ನಡೆಸುತ್ತಿದ್ದಾರೆ.