ಬೆಂಗಳೂರು, ಜು 20 (Daijiworld News/MSP): ಸರ್ಕಾರ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿರುವ ದೋಸ್ತಿ ಪಕ್ಷ ಕೊನೇ ಪ್ರಯತ್ನವೆಂಬಂತೆ ರಾಮಲಿಂಗಾ ರೆಡ್ಡಿ ಅವರನ್ನು ಕೊನೆಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಜೆಡಿಎಸ್ ವರಿಷ್ಟ ಹೆಚ್.ಡಿ ದೇವೇಗೌಡರನ್ನು ರಾಮಲಿಂಗಾ ರೆಡ್ಡಿ ಅವರನ್ನು ಮಾತುಕತೆಗಾಗಿ ನಿವಾಸಕ್ಕೆ ಕರೆಸಿಕೊಂಡಿದ್ದು, ಆ ಮೂಲಕ ಅತೃಪ್ತ ಶಾಸಕರನ್ನು ಬೆಂಗಳೂರಿಗೆ ಸೆಳೆಯಲು ಮುಂದಾಗಿದ್ದಾರೆ.
ಹೆಚ್.ಡಿ ದೇವೇಗೌಡರನ್ನು ಭೇಟಿಯಾದ ಬಳಿಕ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, ಭೇಟಿಯಲ್ಲಿ ಯಾವುದೇ ವಿಶೇಷತೆ ಇಲ್ಲ, ಅತೃಪ್ತರ ಮನವೊಲಿಸುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಮಾತ್ರವಲ್ಲದೆ ಅತೃಪ್ತರ್ಯಾರೂ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ರಾಮಲಿಂಗಾ ರೆಡ್ಡಿ ಅವರಿಗೆ ಡಿಸಿಎಂ ಹುದ್ದೆ ನೀಡಲಾಗುತ್ತದೆ ಎಂಬ ವದಂತಿಯನ್ನು ತಳ್ಳಿ ಹಾಕಿದ ಅವರು, ದೇವೇಗೌಡರ ಜೊತೆ ಸಭೆಯಲ್ಲಿ ಡಿಸಿಎಂ ಹುದ್ದೆ ಬಗ್ಗೆ ಚರ್ಚೆ ಆಗಿಲ್ಲ ಮತ್ತು ಈ ರೀತಿಯ ಯಾವುದೇ ಆಸೆ ಇಲ್ಲ ಎಂದರು.
ಭೇಟಿ ವೇಳೆ ಗೌಡರು, ರೆಡ್ಡಿ ಅವರಿಗೆ , ದೋಸ್ತಿ ಸರ್ಕಾರದ ವಿರುದ್ಧ ಯಾವುದೇ ಸಿಟ್ಟು ಅಸಮಾಧಾನವಿದ್ದರೂ ಅದೆಲ್ಲವನ್ನು ಮರೆತು ಬಿಡುವಂತೆ ಹಾಗೂ ನಿಮ್ಮಿಷ್ಟದ ನಾಯಕರೇ ಸರ್ಕಾರದಲ್ಲಿ ಪ್ರಮುಖರಾಗಿರುತ್ತಾರೆ ಎಂಬ ಆಮಿಷವನ್ನು ನೀಡಿದ್ದಾರೆ ಎನ್ನಲಾಗಿದೆ.
ಆದರೆ ಇದೆಲ್ಲವನ್ನು ತಿರಸ್ಕರಿಸಿರುವ ರಾಮಲಿಂಗಾರೆಡ್ದಿ , ಇದೊಂದು ಸೌಜನ್ಯದ ಭೇಟಿ ಆಗಾಗ ದೇವೇಗೌಡರನ್ನ ಭೇಟಿ ಆಗ್ತಿದ್ದೆ. ಹಾಗೇ ಇವತ್ತು ಭೇಟಿಯಾಗಿದ್ದೇನೆ. ಅದ್ರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದಿದ್ದಾರೆ.