ಬೆಂಗಳೂರು, ಜು21(Daijiworld News/SS): ಚಂದ್ರಯಾನ–2ರ ನೌಕೆಯನ್ನು ಹೊತ್ತು ನಭಕ್ಕೆ ಚಿಮ್ಮಲಿರುವ ರಾಕೆಟ್ ‘ಬಾಹುಬಲಿ’ ಸಮರ್ಥವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.
ಚಂದ್ರಯಾನ–2 ಮಿಷನ್ನ ಉಡ್ಡಯನ ರಾಕೇಟ್ನಲ್ಲಿನ ತಾಂತ್ರಿಕ ದೋಷವನ್ನು ಪರೀಕ್ಷಿಸಿ, ಸರಿಪಡಿಸಲಾಗಿದ್ದು, ಅದರ ಕಾರ್ಯಕ್ಷಮತೆ ಸಮರ್ಥವಾಗಿದೆ. ಉಡ್ಡಯನಕ್ಕೆ ಪೂರ್ವ ತಯಾರಿ ಪೂರ್ಣಗೊಂಡಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ.
ಇದುವರೆಗೂ ಯಾವ ದೇಶವೂ ಹೋಗಿರದ ಚಂದ್ರನ ಮೇಲ್ಮೈಗೆ ತೆರಳಿ ಅಧ್ಯಯನ ನಡೆಸುವ ಚಂದ್ರಯಾನ-2 ಜುಲೈ 15 ರಂದು ಆಗಸಕ್ಕೆ ಚಿಮ್ಮಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಾದ ತಾಂತ್ರಿಕ ಅಡಚಣೆಯಿಂದ ಉಡಾವಣೆಯನ್ನು ಇಸ್ರೋ ರದ್ದುಗೊಳಿಸಿತ್ತು.
2009 ರಲ್ಲಿ ನಡೆದಿದ್ದ ಚಂದ್ರಯಾನ 1 ರ ಯಶಸ್ಸಿನ ನಂತರ ಸ್ಪೂರ್ತಿ ಪಡೆದ ಇಸ್ರೋ ಚಂದ್ರಯಾನ 2 ರ ಯೋಜನೆ ರೂಪಿಸಿತ್ತು. ಕೊನೆಯ ಕ್ಷಣದಲ್ಲಿ ಅದರ ಉಡಾವಣೆ ರದ್ದಾದ ಹಿನ್ನೆಲೆಯಲ್ಲಿ ಇದೇ ಜುಲೈ 22ರಂದು ಬಾಹುಬಲಿ ಉಡಾವಣಾ ವಾಹನ (ಜಿಎಸ್ ಎಲ್ ವಿ) ಆಗಸಕ್ಕೆ ಹಾರಲಿದೆ.
ಚಂದ್ರನ ಮೇಲ್ಮೈನ ವಿಶ್ಲೇಷಣೆ, ಸ್ಥಳಾಕೃತಿಯ ವಿವರಣೆ, ವಾತಾವರಣ, ಖನಿಜ ಸಂಪತ್ತು, ಪ್ರಾಕೃತಿಕ ಸಂಪನ್ಮೂಲಗಳು, ಹೈಡ್ರಾಕ್ಸಿಲ್ ಮತ್ತು ನೀರು ಅಥವಾ ಮಂಜು ಎಷ್ಟಿದೆ ಎಂಬುದನ್ನು ಪತ್ತೆಹಚ್ಚುವುದು ಚಂದ್ರಯಾನ-2ರ ಉದ್ದೇಶವಾಗಿದೆ.