ನವದೆಹಲಿ, ಫೆ. 28 (DaijiworldNews/TA): ಇಸ್ರೇಲ್ ಮತ್ತು ಅಮೆರಿಕ ಇರಾನ್ ವಿರುದ್ಧ ಜಂಟಿ ದಾಳಿ ನಡೆಸಿದ ಹಿನ್ನೆಲೆ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಿರುವುದರಿಂದ, ಟೆಲ್ ಅವೀವ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಇಸ್ರೇಲ್ನಲ್ಲಿರುವ ಭಾರತೀಯ ಪ್ರಜೆಗಳಿಗೆ ತುರ್ತು ಸಲಹೆ ನೀಡಿದೆ.

ಪ್ರಸ್ತುತ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್ನಲ್ಲಿರುವ ಎಲ್ಲಾ ಭಾರತೀಯರು ಅತ್ಯಂತ ಎಚ್ಚರಿಕೆಯಿಂದ ವರ್ತಿಸಿ, ಎಲ್ಲಾ ಸಮಯದಲ್ಲೂ ಜಾಗರೂಕರಾಗಿರಬೇಕು ಎಂದು ಸೂಚಿಸಲಾಗಿದೆ. ಇಸ್ರೇಲಿ ಅಧಿಕಾರಿಗಳು ಮತ್ತು ಹೋಮ್ ಫ್ರಂಟ್ ಕಮಾಂಡ್ ಹೊರಡಿಸಿರುವ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಗಿದೆ.
ಭಾರತೀಯರು ಅಧಿಕೃತ ನಾಗರಿಕ ರಕ್ಷಣಾ ಮಾರ್ಗದರ್ಶಕ ತಾಣದಲ್ಲಿ ಪ್ರಕಟವಾಗುವ ನವೀಕರಣಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು. ಗೊತ್ತುಪಡಿಸಿದ ಆಶ್ರಯ ತಾಣಗಳ ಸಮೀಪದಲ್ಲೇ ಇರಬೇಕು ಹಾಗೂ ತಮ್ಮ ನಿವಾಸ ಅಥವಾ ಕೆಲಸದ ಸ್ಥಳದ ಬಳಿ ಇರುವ ಸುರಕ್ಷಿತ ಸ್ಥಳಗಳ ಮಾಹಿತಿ ಹೊಂದಿರಬೇಕು ಎಂದು ಸಲಹೆ ನೀಡಲಾಗಿದೆ.
ಮುಂದಿನ ಸೂಚನೆ ಬರುವವರೆಗೂ ಇಸ್ರೇಲ್ ಒಳಗೆ ಅನಗತ್ಯ ಸಂಚಾರವನ್ನು ತಪ್ಪಿಸಲು ತಿಳಿಸಲಾಗಿದೆ. ಸ್ಥಳೀಯ ಸುದ್ದಿಗಳು, ಅಧಿಕೃತ ಪ್ರಕಟಣೆಗಳು ಹಾಗೂ ತುರ್ತು ಎಚ್ಚರಿಕೆಗಳನ್ನು ನಿರಂತರವಾಗಿ ಗಮನಿಸುವಂತೆ ಸೂಚಿಸಲಾಗಿದೆ.
ತುರ್ತು ಪರಿಸ್ಥಿತಿಯಲ್ಲಿ ಟೆಲ್ ಅವೀವ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು +972-54-7520711 ಸಂಖ್ಯೆಯಲ್ಲಿ ಸಂಪರ್ಕಿಸಬಹುದು. ಇ-ಅಂಚೆ ಮೂಲಕ ಸಂಪರ್ಕಿಸಲು [cons1.telaviv@mea.gov.in](mailto:cons1.telaviv@mea.gov.in) ವಿಳಾಸವನ್ನು ಬಳಸಬಹುದು.
ಇದರ ಜೊತೆಗೆ, ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಇರಾನ್ನಲ್ಲಿರುವ ಭಾರತೀಯರಿಗೆ ಅತ್ಯಂತ ಎಚ್ಚರಿಕೆಯಿಂದ ವರ್ತಿಸಿ, ಅನಗತ್ಯ ಹೊರಚಲನವಲನವನ್ನು ತಪ್ಪಿಸಿ ಸಾಧ್ಯವಾದಷ್ಟು ಮನೆಯೊಳಗೆ ಇರುವಂತೆ ಸೂಚಿಸಿದೆ. ತುರ್ತು ಸಂದರ್ಭಗಳಲ್ಲಿ +989128109115, +989128109109, +989128109102 ಮತ್ತು +989932179359 ಸಂಖ್ಯೆಗಳ ಮೂಲಕ ಸಂಪರ್ಕಿಸಲು ತಿಳಿಸಲಾಗಿದೆ.
ಹಾಗೆಯೇ, ದೋಹಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಕತಾರ್ನಲ್ಲಿರುವ ಭಾರತೀಯರು ಅತ್ಯಂತ ಎಚ್ಚರಿಕೆಯಿಂದ ವರ್ತಿಸಿ, ರಾಯಭಾರ ಕಚೇರಿ ಹಾಗೂ ಸ್ಥಳೀಯ ಆಡಳಿತದಿಂದ ಬರುವ ಎಲ್ಲಾ ನವೀಕರಣಗಳನ್ನು ನಿಕಟವಾಗಿ ಗಮನಿಸಬೇಕು ಎಂದು ತಿಳಿಸಿದೆ. ಸಹಾಯವಾಣಿ ಸಂಖ್ಯೆ 00974-55647502. ಇ-ಅಂಚೆ ಮೂಲಕ [cons.doha@mea.gov.in](mailto:cons.doha@mea.gov.in) ವಿಳಾಸದಲ್ಲಿ ಸಂಪರ್ಕಿಸಬಹುದು.
ಭಾರತೀಯ ರಾಯಭಾರಿ ಕಚೇರಿಗಳು ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಗತ್ಯವಿದ್ದಲ್ಲಿ ಸಹಾಯಕ್ಕೆ ಸಿದ್ಧವಾಗಿವೆ ಎಂದು ತಿಳಿಸಲಾಗಿದೆ.