ನವದೆಹಲಿ, ಫೆ. 28 (DaijiworldNews/TA): ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ದೇಶಗಳು ಇರಾನ್ ಮೇಲೆ ಜಂಟಿ ದಾಳಿ ನಡೆಸಿದ ಬಳಿಕ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಬಿಕ್ಕಟ್ಟಿನ ಪರಿಸ್ಥಿತಿಯನ್ನು ಶಮನಗೊಳಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮಾರ್ಗವನ್ನು ಅನುಸರಿಸಬೇಕು ಎಂದು ಭಾರತ ಕರೆ ನೀಡಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರಕಟಿಸಿದ ಹೇಳಿಕೆಯಲ್ಲಿ, “ಈ ಪ್ರದೇಶದಲ್ಲಿನ ಭಾರತೀಯ ರಾಯಭಾರ ಕಚೇರಿಗಳು ಅಲ್ಲಿನ ಎಲ್ಲಾ ಭಾರತೀಯ ಪ್ರಜೆಗಳೊಂದಿಗೆ ನಿರಂತರ ಸಂಪರ್ಕದಲ್ಲಿವೆ. ಅವರು ಜಾಗರೂಕರಾಗಿರಲು ಸೂಚಿಸಲಾಗಿದೆ. ಸ್ಥಳೀಯ ಭದ್ರತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸಂಬಂಧಿತ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕದಲ್ಲಿರಬೇಕು” ಎಂದು ತಿಳಿಸಿದ್ದಾರೆ.
“ಸಂಘರ್ಷದಲ್ಲಿರುವ ಎಲ್ಲ ಕಡೆಯವರು ಸಂಯಮದಿಂದ ವರ್ತಿಸಬೇಕು. ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳದಂತೆ ನೋಡಿಕೊಳ್ಳಬೇಕು ಮತ್ತು ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು” ಎಂದು ಅವರು ಹೇಳಿದ್ದಾರೆ. ಎಲ್ಲಾ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದು ಅಗತ್ಯ ಎಂದು ಭಾರತ ಒತ್ತಿ ಹೇಳಿದೆ.
ಇತ್ತ ಇಂದಿನ ದಾಳಿಯಲ್ಲಿ ಇರಾನ್ನ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ ಹಾಗೂ ಕ್ರಾಂತಿಕಾರಿ ಗಾರ್ಡ್ ಪಡೆಯ ಕಮಾಂಡರ್ ಮೊಹಮ್ಮದ್ ಪಕ್ಪೂರ್ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇರಾನ್ ಸರ್ಕಾರದಿಂದ ಅಧಿಕೃತ ದೃಢೀಕರಣ ಇನ್ನಷ್ಟೇ ನಿರೀಕ್ಷೆಯಲ್ಲಿದೆ. ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಕತಾರ್ ಮತ್ತು ಕುವೈತ್ ಸೇರಿದಂತೆ ಹಲವು ದೇಶಗಳಲ್ಲಿರುವ ಯುಎಸ್ ಸೈನಿಕ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆಯೆಂದು ವರದಿಯಾಗಿದೆ. ಜೊತೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ನ ಅಬುಧಾಬಿ ಮತ್ತು ದುಬೈ ಮೇಲೆಯೂ ದಾಳಿ ನಡೆದಿದ್ದು, ಕನಿಷ್ಠ ಒಬ್ಬ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜರ್ಮನಿ, ಫ್ರಾನ್ಸ್, ಸ್ವಿಟ್ಜರ್ಲೆಂಡ್ ಮತ್ತು ಇಟಲಿ ಸೇರಿದಂತೆ ಹಲವು ಯುರೋಪಿಯನ್ ರಾಷ್ಟ್ರಗಳು ತುರ್ತು ಸಭೆಗಳನ್ನು ನಡೆಸಿ ಬೆಳವಣಿಗೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿವೆ.