ಹರಿಯಾಣ, ಮಾ. 02 (DaijiworldNews/AK): ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸು ಮಾಡಲು ಎರಡು ವರ್ಷದ ಮಗನಿಂದ ಎರಡು ವರ್ಷಗಳ ಕಾಲ ಪ್ರತ್ಯೇಕವಾಗಿ ವಾಸಿಸಲು ಆಯ್ಕೆ ಮಾಡಿಕೊಂಡ ತಾಯಿ ಅನು ಕುಮಾರಿಯ ಕಥೆ ಯಾರ ಕಣ್ಣಲ್ಲಾದರೂ ನೀರು ತರಿಸುತ್ತದೆ. ಅನು ಕುಮಾರಿ ಈ ಬೇಸರದ ಕ್ಷಣದಲ್ಲಿ ಕೂಡ 2017 ರಲ್ಲಿ ಅಖಿಲ ಭಾರತ 2 ರ್ಯಾಂಕ್ ಗಳಿಸಿದ್ದಾರೆ. ಅವರ ಸ್ಪೂರ್ತಿದಾಯ ಕಥೆ ಇಲ್ಲಿದೆ.

ಹರಿಯಾಣದ ಸೋನಿಪತ್ನಲ್ಲಿ ಹುಟ್ಟಿ ಬೆಳೆದರು. ದೆಹಲಿ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಬಿಎಸ್ಸಿ (ಆನರ್ಸ್) ಪದವಿ, ನಂತರ ಐಎಂಟಿ ನಾಗ್ಪುರದಿಂದ ಹಣಕಾಸು ಮತ್ತು ಮಾರ್ಕೆಟಿಂಗ್ನಲ್ಲಿ ಎಂಬಿಎ ಪದವಿ ಪಡೆದ ಅವರು, ಕಾರ್ಪೊರೇಟ್ ವಲಯದಲ್ಲಿ ಹೆಚ್ಚಿನ ಸಂಬಳದ ಉದ್ಯೋಗವನ್ನು ಪಡೆದರು.
2012 ರಲ್ಲಿ ಅವರ ಮದುವೆಯ ನಂತರ, ಅವರು ಗುರುಗ್ರಾಮ್ಗೆ ವರ್ಗಾವಣೆಯಾದರು ಮತ್ತು ಶೀಘ್ರದಲ್ಲೇ ತಾಯಿಯಾದರು. ಒಟ್ಟಿನಲ್ಲಿ ಉತ್ತಮ ವೃತ್ತಿ ಜೀವನ, ಕೌಟುಂಬಿಕ ಜೀವನ ಅವರದ್ದಾಗಿತ್ತು. ಅವರ ಮಗನಿಗೆ ಕೇವಲ ಎರಡು ವರ್ಷ ವಯಸ್ಸಾಗಿತ್ತು, ಈ ಸಮಯದಲ್ಲಿ ಯಾವುದೇ ಮಗುವಿಗೆ ತನ್ನ ತಾಯಿಯ ಅಗತ್ಯವಿರುತ್ತದೆ. ಆದರೆ ಪರೀಕ್ಷೆಗೆ ಹೆಚ್ಚಿನ ತಯಾರಿಯನ್ನು ಅವರು ಮಾಡಿಕೊಳ್ಳಬೇಕಿತ್ತು, ಮಗುವನ್ನು ಬಿಟ್ಟು ಇರಬೇಕಾದ ಸ್ಥಿತಿ ಒಂದೆಡೆಯಾದರೆ ಇನ್ನೊಂದೆಡೆ ಪರೀಕ್ಷೆಗೆ ತಯಾರಾಗಬೇಕಾದ ಅನಿವಾರ್ಯತೆ ಹೀಗಾಗಿ ಸಾಕಷ್ಟು ಸಂದಿಗ್ಧತೆಯನ್ನು ಅವರು ಎದುರಿಸಬೇಕಾಯಿತು.
ಒಂದು ಅಂಕದಿಂದ ಫೇಲ್ ಆದ ಅನು ತಮ್ಮ ಛಲ ಬಿಡಲಿಲ್ಲ. ತಮ್ಮ ಎರಡನೇ ಪ್ರಯತ್ನದಲ್ಲಿ ಅನು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಮಾತ್ರವಲ್ಲ ಅಖಿಲ ಭಾರತ 2 ನೇ ರ್ಯಾಂಕ್ನೊಂದಿಗೆ, ಗುರಿ ಸ್ಪಷ್ಟವಾಗಿದ್ದರೆ ಮತ್ತು ದೃಢಸಂಕಲ್ಪವು ಅಚಲವಾಗಿದ್ದರೆ ಯಾವುದೇ ತ್ಯಾಗವು ದೊಡ್ಡದಲ್ಲ ಎಂದು ಸಾಬೀತುಪಡಿಸಿದರು. ಇಂದು ಅನು ಕುಮಾರಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.