ಬೆಂಗಳೂರು, ಮಾ. 02 (DaijiworldNews/AA): ಇರಾನ್- ಇಸ್ರೇಲ್ ಯುದ್ಧದಿಂದಾಗಿ ಮಧ್ಯ ಪ್ರಾಚ್ಯದಲ್ಲಿ ಸಿಲುಕಿರೋ ಕರ್ನಾಟಕದವರ ರಕ್ಷಣೆಗೆ ಕರ್ನಾಟಕ ಸರ್ಕಾರ ಕ್ರಮವಹಿಸಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಅವರು, "ಯಾರು ಆತಂಕವಾಗೋದು ಬೇಡ. ರಾಜ್ಯ ಸರ್ಕಾರ ಕೇಂದ್ರ ವಿದೇಶಾಂಗ ಇಲಾಖೆ ಜೊತೆ ಸಂಪರ್ಕದಲ್ಲಿದೆ. ಎಲ್ಲರ ರಕ್ಷಣೆಗೂ ಕ್ರಮ ತೆಗೆದುಕೊಳ್ಳಲಿದೆ" ಎಂದು ತಿಳಿಸಿದರು.
"ಶನಿವಾರದಿಂದಲೇ ಸಹಾಯವಾಣಿ ಪ್ರಾರಂಭ ಮಾಡಲಾಗಿದೆ. ಈವರೆಗೂ 109 ಜನ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಈಗಾಗಲೇ ವಿದೇಶಾಂಗ ಇಲಾಖೆ ಮತ್ತು ದೆಹಲಿಯಲ್ಲಿರೋ ನಮ್ಮ ರೆಸಿಡೆಂಟ್ ಕಮೀಷನರ್ ಕೂಡ ಕೇಂದ್ರದ ಜೊತೆ ಸಂಪರ್ಕದಲ್ಲಿ ಇದ್ದಾರೆ" ಎಂದರು.
"ಮಧ್ಯಪ್ರಾಚ್ಯದಲ್ಲಿ ಸಿಲುಕಿರುವವರಿಗೆ 3 ವಿಷಯಗಳ ಬಗ್ಗೆ ಆತಂಕ ಇದೆ. ನಮ್ಮನ್ನ ಹೇಗೆ ವಾಪಸ್ ಕರೆಸುತ್ತೀರಾ? ವಿಶೇಷ ವಿಮಾನದ ಮೂಲಕನಾ ಹೇಗೆ ಅಂತ. ನಾವು ಕೇಂದ್ರದ ಜೊತೆ ಮಾತಾಡ್ತಾ ಇದ್ದೇವೆ. ಸದ್ಯ ಈಗ ಏರ್ ಟ್ರಾಫಿಕ್ ನಿಷೇಧ ಆಗಿದೆ. ಏರ್ ಟ್ರಾಫಿಕ್ ಕ್ಲಿಯರ್ ಆದ ಕೂಡಲೇ ಕೇಂದ್ರ ಸರ್ಕಾರ ಹೇಗೆ ಕರೆಸಿಕೊಳ್ಳುತ್ತದೆ ನಮಗೆ ಮಾಹಿತಿ ಸಿಗುತ್ತದೆ. ಏರ್ ಟ್ರಾಫಿಕ್ ಕ್ಲಿಯರ್ ಆಗೋವರೆಗೂ ತೆರವು ಕೆಲಸ ಆಗೊಲ್ಲ. ಹೀಗಾಗಿ ಎಲ್ಲರೂ ಶಾಂತವಾಗಿ ಇರಬೇಕು ಅಂತ ಮನವಿ ಮಾಡಿದ್ರು. ಕದನ ವಿರಾಮ ಆದ ಕೂಡಲೇ ವಾಪಸ್ ಕರೆಸಲು ಕ್ರಮ ಆಗುತ್ತದೆ" ಎಂದು ಹೇಳಿದರು.
"ಏರ್ ಪೋರ್ಟ್ ನಲ್ಲಿ ಸಿಲುಕಿರೋರು ವೀಸಾ ಸಮಸ್ಯೆ ಇದ್ದರೆ ಸ್ಥಳೀಯ ರಾಯಭಾರಿ ಕಚೇರಿಗೆ ಅಥವಾ ನಮಗೆ ಕರೆ ಮಾಡಿದ್ರೆ ವೀಸಾ ವ್ಯವಸ್ಥೆ ಮಾಡಲಾಗುತ್ತದೆ ಅಂತ ತಿಳಿಸಿದರು. ಇನ್ನು ಕರ್ನಾಟಕದವರು ವಾಪಸ್ ಬರೋವರೆಗೂ ಅಲ್ಲಿ ಆಗೋ ಖರ್ಚು ವೆಚ್ಚಗಳನ್ನ ರಾಜ್ಯ ಸರ್ಕಾರವೇ ಭರಿಸಲಿದೆ. ಇದನ್ನ ನಾವು ಕೇಂದ್ರ ಸರ್ಕಾರದ ಮೂಲಕ ಮಾಡಬೇಕು. ಕೇಂದ್ರ ಸರ್ಕಾರ ಹಣವನ್ನ ಭರಿಸಿ ನಮಗೆ ಮಾಹಿತಿ ಕೊಟ್ಟರೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಹಣವನ್ನ ಭರಿಸಲಿದೆ" ಎಂದು ಭರವಸೆ ನೀಡಿದರು.