ಶ್ರೀನಗರ, ಮಾ. 02 (DaijiworldNews/AA): ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರದ ಹಲವಾರು ಭಾಗಗಳಲ್ಲಿ ಎರಡನೇ ದಿನವೂ ಪ್ರತಿಭಟನೆ ನಡೆಸಲಾಯಿತು. ಕೆಲವು ಪ್ರತಿಭಟನಾ ಸ್ಥಳಗಳಲ್ಲಿ ಭದ್ರತಾ ಪಡೆಗಳು ಪ್ರತಿಭಟನಾಕಾರರನ್ನು ಚದುರಿಸಲು ಲಘು ಲಾಠಿ ಚಾರ್ಜ್ ನಡೆಸಿವೆ.

ಶ್ರೀನಗರದ ಬೆಮಿನಾ, ಗುಂಡ್ ಹಸಿಭಟ್ ಮತ್ತು ಜಹಾಂಗೀರ್ ಚೌಕ್ ಪ್ರದೇಶದಲ್ಲಿ ಮತ್ತು ದಕ್ಷಿಣ ಕಾಶ್ಮೀರದ ಪುಲ್ವಾಮಾ ಪಟ್ಟಣದಲ್ಲಿ ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆಗಳು ಭುಗಿಲೆದ್ದವು. ಶಿಯಾ ಜನಸಂಖ್ಯೆ ಹೆಚ್ಚಿರುವ ಈ ಪ್ರದೇಶಗಳಲ್ಲಿ ಹಲವಾರು ಪ್ರತಿಭಟನಾಕಾರರು ಜಮಾಯಿಸಿದರು. ಅವರು ಬೀದಿಗಳಲ್ಲಿ ಮೆರವಣಿಗೆ ನಡೆಸಿದರು ಮತ್ತು ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಕಳೆದ ಶನಿವಾರ ಬೆಳಗ್ಗೆ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಖಮೇನಿ ಸಾವನ್ನಪ್ಪಿದ್ದು, ಪ್ರತೀಕಾರವಾಗಿ ಇರಾನ್, ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ.