ನವದೆಹಲಿ, ಮಾ. 03 (DaijiworldNews/AA): ಬಲಿಷ್ಠ ಆರ್ಥಿಕತೆ ಹೊಂದಿದ ಭಾರತ ಜಗತ್ತಿಗೆ ದಾರಿದೀಪವಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಬಜೆಟ್ ನಂತರದ ವೆಬಿನಾರ್ನಲ್ಲಿ ಮಾತನಾಡಿದ ಅವರು, "ಉತ್ಪಾದನೆ, ಲಾಜಿಸ್ಟಿಕ್ಸ್ ಮತ್ತು ಎಂಎಸ್ಎಂಇ ವಲಯ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಭಾರತೀಯ ಆರ್ಥಿಕತೆಯ ಪ್ರಮುಖ ಆಧಾರ ಸ್ತಂಭಗಳಾಗಿವೆ. ಈ ವಲಯಗಳನ್ನು ಬಲಪಡಿಸುವುದರಿಂದ ದೇಶದ ಆರ್ಥಿಕ ಬೆಳವಣಿಗೆ ವೇಗಗೊಳ್ಳುತ್ತದೆ. ಇದು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ" ಎಂದು ಹೇಳಿದರು.
"ಜಗತ್ತು ವಿಶ್ವಾಸಾರ್ಹ ಉತ್ಪಾದನಾ ಪಾಲುದಾರರನ್ನು ಹುಡುಕುತ್ತಿದೆ. ಈ ವಿಷಯದಲ್ಲಿ ಭಾರತಕ್ಕೆ ಉತ್ತಮ ಅವಕಾಶವಿದೆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆಯನ್ನು ಹೆಚ್ಚಿಸಬೇಕು. ಗುಣಮಟ್ಟದ ಮೇಲೆ ಗಮನಹರಿಸಬೇಕು. ನಮ್ಮ ಉತ್ಪನ್ನಗಳ ಗುಣಮಟ್ಟ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿರಬೇಕು" ಎಂದರು.
"ಉತ್ಪನ್ನ ಮಾನದಂಡಗಳನ್ನು ಸುಧಾರಿಸುವುದು ಭಾರತೀಯ ವ್ಯವಹಾರ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ವಿಸ್ತರಿಸಲು ಸಹಾಯ ಮಾಡುತ್ತದೆ. ಭಾರತವು ತನ್ನ ಬಲಿಷ್ಠ ಆರ್ಥಿಕತೆಯಿಂದ ಜಗತ್ತಿಗೆ ಆಶಾಕಿರಣವಾಗಿದೆ" ಎಂದು ಅಭಿಪ್ರಾಯಪಟ್ಟರು.