ನವದೆಹಲಿ, ಮಾ. 20 (DaijiworldNews/AK): ಪ್ರಧಾನಿ ನರೇಂದ್ರ ಮೋದಿ ಯೋಗ, ಫಿಟ್ನೆಸ್, ಉತ್ತಮ ಆಹಾರ ಸೇವನೆಗೆ ಸದಾ ಆದ್ಯತೆ ನೀಡುತ್ತಾರೆ. ಅವರು ಯಾವ ರಾಜ್ಯ, ಯಾವ ದೇಶಕ್ಕೇ ಪ್ರಯಾಣಿಸಲಿ ತಮ್ಮ ಯೋಗ ದಿನಚರಿ, ತಾವು ಸೇವಿಸುವ ಆಹಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಪ್ರತಿದಿನ ಯೋಗಾಭ್ಯಾಸ, ಧ್ಯಾನ ಮಾಡುವ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೂ ದಿನವೂ ಯೋಗ ಮಾಡಲು ಸಲಹೆ ನೀಡಿದ್ದಾರೆ.

ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ಆರೋಗ್ಯವಾಗಿರಿ, ಸಂತೋಷವಾಗಿರಿ. ಚೆನ್ನಾಗಿ ತಿನ್ನಿ, ಆರೋಗ್ಯವಾದುದನ್ನೇ ತಿನ್ನಿ. ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ. ಯೋಗವನ್ನು ದೈನಂದಿನ ಜೀವನದ ಭಾಗವಾಗಿಸಿಕೊಳ್ಳಿ” ಎಂದು ಸಲಹೆ ನೀಡಿದ್ದಾರೆ.
ಅತಿಯಾದ ಸಕ್ಕರೆ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಎಲ್ಲರೂ ಚೆನ್ನಾಗಿ ತಿನ್ನಿರಿ ಮತ್ತು ಆರೋಗ್ಯವಾಗಿರಿ ಎಂದು ಸಲಹೆ ನೀಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ರೀಲ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ಜನರು ತಮ್ಮ ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ ಎಂದು ಒತ್ತಾಯಿಸಿದ್ದಾರೆ.
ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಯುವರಾಜ್ ದುವಾ ಅವರ ರೀಲ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ. ಅವರು ತಮ್ಮ ತಂದೆಗೆ ಸಕ್ಕರೆ ಸೇವನೆಯನ್ನು ಕಡಿಮೆ ಮಾಡಲು ಸಲಹೆ ನೀಡಿ ಎಂದು ಇನ್ಸ್ಟಾಗ್ರಾಂನಲ್ಲಿ ತಮಾಷೆಯಾಗಿ ಪ್ರಧಾನಿ ಮೋದಿಗೆ ಮನವಿ ಮಾಡಿದ್ದರು. “ಯುವರಾಜ್ ಅವರ ಕೋರಿಕೆಯ ಮೇರೆಗೆ ನಾನು ಅವರ ತಂದೆಗೆ ಮತ್ತು ಎಲ್ಲರಿಗೂ ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವಂತೆ ಒತ್ತಾಯಿಸುತ್ತೇನೆ. ಆರೋಗ್ಯವಾಗಿರಿ, ಸಂತೋಷವಾಗಿರಿ!” ಎಂದು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.