ನವದೆಹಲಿ, ಮಾ. 21 (DaijiworldNews/TA): ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ‘ಡಿಜಿಟಲ್ ಅರೆಸ್ಟ್’ ವಂಚನೆಗಳನ್ನು ನಿಯಂತ್ರಿಸಲು ಕೇಂದ್ರ ಗೃಹ ಸಚಿವಾಲಯ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ವಾಟ್ಸಾಪ್ ಸಂಸ್ಥೆಗೆ ಹಲವು ಕಠಿಣ ನಿರ್ದೇಶನಗಳನ್ನು ನೀಡಲಾಗಿದೆ.

ವಂಚನೆಗೆ ಬಳಸಲಾಗುತ್ತಿರುವ ಮೊಬೈಲ್ ಡಿವೈಸ್ ಐಡಿಗಳನ್ನು ಶಾಶ್ವತವಾಗಿ ನಿರ್ಬಂಧಿಸುವಂತೆ ಸೂಚನೆ ನೀಡಲಾಗಿದೆ. ವಂಚನೆ ನಡೆಸುವ ವ್ಯಕ್ತಿ ಅಥವಾ ಜಾಲವನ್ನು ಗುರುತಿಸಿದ ತಕ್ಷಣವೇ, ಅವರು ಬಳಸುವ ಮೊಬೈಲ್ಗಳ ಡಿವೈಸ್ ಐಡಿಗಳನ್ನು ಬ್ಲಾಕ್ ಮಾಡಬೇಕು. ಇದರಿಂದ ವಂಚಕರು ಅದೇ ಫೋನ್ ಬಳಸಿ ಹೊಸ ಖಾತೆ ತೆರೆಯುವುದನ್ನು ತಡೆಯಬಹುದು.
ಇದಲ್ಲದೆ, ಐಟಿ ನಿಯಮಗಳ ಪ್ರಕಾರ ಡಿಲೀಟ್ ಆಗಿರುವ ಖಾತೆಗಳ ಮಾಹಿತಿಯನ್ನು ಕನಿಷ್ಠ 180 ದಿನಗಳವರೆಗೆ ಸಂಗ್ರಹಿಸಿಡುವುದು ಕಡ್ಡಾಯವಾಗಲಿದೆ. ಇದರಿಂದ ತನಿಖಾ ಸಂಸ್ಥೆಗಳಿಗೆ ಅಗತ್ಯ ಪುರಾವೆಗಳನ್ನು ಸಂಗ್ರಹಿಸಲು ಸಹಾಯವಾಗುತ್ತದೆ.
ವಾಟ್ಸಾಪ್ ಖಾತೆಗಳನ್ನು ಸಕ್ರಿಯ ಮೊಬೈಲ್ ಸಿಮ್ಗೆ ಕಡ್ಡಾಯವಾಗಿ ಲಿಂಕ್ ಮಾಡುವ ವ್ಯವಸ್ಥೆಯನ್ನೂ ಜಾರಿಗೆ ತರಲಾಗುತ್ತಿದೆ. ಅನಾಮಧೇಯ ಬಳಕೆಯನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ 4 ರಿಂದ 6 ತಿಂಗಳೊಳಗೆ ಜಾರಿಗೆ ಬರುವ ಸಾಧ್ಯತೆ ಇದೆ.
ಇನ್ನು, ಪೊಲೀಸ್ ಅಥವಾ ಸಿಬಿಐ ಲೋಗೋಗಳನ್ನು ಪ್ರೊಫೈಲ್ ಚಿತ್ರವಾಗಿ ಬಳಸಿಕೊಂಡು ಜನರನ್ನು ಹೆದರಿಸುವ ವಂಚಕರನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ (AI) ಬಳಸಲಾಗುತ್ತದೆ. ಇಂತಹ ನಕಲಿ ಪ್ರೊಫೈಲ್ಗಳನ್ನು ತಕ್ಷಣವೇ ಅಳಿಸಲು ವಾಟ್ಸಾಪ್ ಒಪ್ಪಿಕೊಂಡಿದೆ.
ಮ್ಯಾಲಿಶಿಯಸ್ ಎಪಿಕೆ ಫೈಲ್ಗಳ ಹಂಚಿಕೆಯನ್ನು ಪತ್ತೆಹಚ್ಚಿ ತಡೆಯುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸೂಚಿಸಲಾಗಿದೆ. 2024ರಲ್ಲಿ ಭಾರತದಲ್ಲಿ ಸುಮಾರು 1.23 ಲಕ್ಷ ಡಿಜಿಟಲ್ ಅರೆಸ್ಟ್ ಪ್ರಕರಣಗಳು ದಾಖಲಾಗಿದ್ದು, ಸುಮಾರು 1,935 ಕೋಟಿ ರೂಪಾಯಿ ಜನರಿಂದ ವಂಚನೆ ಮಾಡಲಾಗಿದೆ. ಒಟ್ಟಾರೆ ಡಿಜಿಟಲ್ ವಂಚನೆಗಳಿಂದ ದೇಶಕ್ಕೆ ಸುಮಾರು 3,000 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.