ಚಂಡೀಗಢ, ಮಾ. 21 (DaijiworldNews/AA): ಅಧಿಕಾರಿಯೊಬ್ಬರ ಆತ್ಮಹತ್ಯೆ ಪ್ರಕರಣದ ವಿವಾದದ ನಡುವೆಯೇ ಪಂಜಾಬ್ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ಅವರು ಶನಿವಾರ ಸಿಎಂ ಭಗವಂತ್ ಮಾನ್ ನೇತೃತ್ವದ ಸಚಿವ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಅಮೃತಸರದಲ್ಲಿ ಗೋದಾಮು ನಿಗಮದ ಜಿಲ್ಲಾ ವ್ಯವಸ್ಥಾಪಕರ ಆತ್ಮಹತ್ಯೆ ಪ್ರಕರಣದ ನಿಷ್ಪಕ್ಷಪಾತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಸಾರಿಗೆ ಸಚಿವ ಭುಲ್ಲರ್ ಅವರನ್ನು ರಾಜೀನಾಮೆ ನೀಡುವಂತೆ ಕೇಳಿಕೊಂಡಿದ್ದೇನೆ ಎಂದು ಸಿಎಂ ಹೇಳಿದ್ದಾರೆ.
ಮ್ಯಾನೇಜರ್ ಗಗನ್ದೀಪ್ ಸಿಂಗ್ ರಾಂಧವ ಎಂಬವರು ವಿಷಕಾರಿ ವಸ್ತು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಅಧಿಕಾರಿ ಮಾಡಿದ್ದ ವಿಡಿಯೋದಲ್ಲಿ ಸಚಿವ ಭುಲ್ಲರ್ ಅವರ ಹೆಸರನ್ನು ಅವರು ಉಲ್ಲೇಖಿಸಿದ್ದಾರೆ.
ಸೆಲ್ಫೋಸ್ ಸೇವಿಸಿ ರಾಂಧವ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರಿ ಬಳಿ 10 ಲಕ್ಷ ಲಂಚ ಸ್ವೀಕರಿಸುವಂತೆ ಒತ್ತಾಯಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಆರೋಪಿಸಿದ್ದಾರೆ.
ಸಚಿವರು ತಮ್ಮ ಸಹಾಯಕರಿಗೆ ಟೆಂಡರ್ ನೀಡಲು ಅಧಿಕಾರಿಗೆ ಒತ್ತಡ ಹೇರಿದ್ದರು ಎಂಬ ಆರೋಪ ಕೇಳಿಬಂದಿದೆ. ಆದರೆ, ಕಾನೂನುಬದ್ಧ ಬಿಡ್ದಾರರನ್ನು ಆಯ್ಕೆ ಮಾಡಿದ್ದರು. ಆದ್ದರಿಂದ ಅಧಿಕಾರಿಯನ್ನು ಸಚಿವರ ಸ್ಥಳಕ್ಕೆ ಕರೆಸಿ ಹಲ್ಲೆ ನಡೆಸಿ ವಿಡಿಯೋ ರೆಕಾರ್ಡ್ ಮಾಡಲು ಮುಂದಾಗಿದ್ದರು ಎಂದು ಹೇಳಲಾಗಿದೆ.
"ನಮ್ಮ ಪಕ್ಷವು ಯಾವಾಗಲೂ ಸತ್ಯವನ್ನು ಬೆಂಬಲಿಸುತ್ತದೆ. ಯಾವಾಗಲೂ ಸತ್ಯದ ಪರವಾಗಿ ನಿಲ್ಲುತ್ತದೆ. ಆದ್ದರಿಂದ, ನನ್ನ ವಿರುದ್ಧದ ಆ ಆರೋಪಗಳನ್ನು ಸರಿಯಾಗಿ ತನಿಖೆ ಮಾಡಬೇಕೆಂದು ನಾನು ಬಯಸುತ್ತೇನೆ. ಈ ತನಿಖೆ ಪೂರ್ಣಗೊಳ್ಳುವವರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ರಾಜೀನಾಮೆ ಅನುಮೋದಿಸುವಂತೆ ಸಿಎಂ ಅವರಲ್ಲಿ ಮನವಿ ಮಾಡುತ್ತೇನೆ" ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡುವ ಮೂಲಕ ಸಚಿವ ಭುಲ್ಲರ್ ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.