ಕೋಲ್ಕತ್ತಾ, ಮಾ. 28 (DaijiworldNews/AA): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಕೇಂದ್ರ ಗೃಹಸಚಿವ ಅಮಿತ್ ಶಾ ಚಾರ್ಜ್ಶೀಟ್ ಬಿಡುಗಡೆ ಮಾಡಿದ್ದಾರೆ.

ಕೋಲ್ಕತ್ತಾದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಇದು ಕೇವಲ ಟಿಎಂಸಿ ವಿರುದ್ಧದ ಚಾರ್ಜ್ ಶೀಟ್ ಅಲ್ಲ, ಇದು ಕೇವಲ ಬಿಜೆಪಿಯ ಚಾರ್ಜ್ಶೀಟ್ ಅಲ್ಲ. ಬದಲಾಗಿ ಬಿಜೆಪಿ ಧ್ವನಿ ನೀಡುತ್ತಿರುವ ಬಂಗಾಳದ ಜನರ ಜಾರ್ಜ್ ಶೀಟ್" ಎಂದಿದ್ದಾರೆ.
ಬಂಗಾಳವು ಕಳೆದ 15 ವರ್ಷಗಳಿಂದ ಭಯ, ಭ್ರಷ್ಟಾಚಾರ ಮತ್ತು ತಾರತಮ್ಯದ ರಾಜಕೀಯದಿಂದ ತುಂಬಿಕೊಂಡಿದೆ. ಮುಂಬರುವ ಚುನಾವಣೆಗಳು ರಾಜ್ಯಕ್ಕೆ ಮಾತ್ರವಲ್ಲ, ದೇಶಕ್ಕೂ ನಿರ್ಣಾಯಕವಾಗಿದೆ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದಾಗಿದೆ. ದೇಶದ ಭದ್ರತೆ ಕಾಪಾಡಿಕೊಳ್ಳಲು ಮತ್ತು ಅಕ್ರಮ ವಲಸಿಗರನ್ನ ತೆಗೆದುಹಾಕಲು ಚುನಾವಣೆಯಲ್ಲಿ ಗೆಲ್ಲುವುದು ಅಗತ್ಯವಾಗಿದೆ. ಅದಕ್ಕಾಗಿ ಮುಂಬರುವ ಚುನಾವಣೆಯಲ್ಲಿ 'ಭಯ' ಬೇಕಾ ಅಥವಾ 'ಭರವಸೆ' ಬೇಕಾ ಎಂಬುದನ್ನು ಬಂಗಾಳದ ಜನ ನಿರ್ಧರಿಸಬೇಕು ಎಂದು ಹೇಳಿದ್ದಾರೆ.
"ತೃಣಮೂಲ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲು ಸುಳ್ಳು, ಭಯ, ಹಿಂಸಾಚಾರವನ್ನೇ ಆಶ್ರಯಿಸಿಕೊಂಡು ಬರುತ್ತಿದೆ. ಆದರೆ ಯಾವ್ದೇ ಸರ್ಕಾರದ ಅಡಿಪಾಯ ಸಾರ್ವಜನಿಕ ಕಲ್ಯಾಣವಾಗಿರಬೇಕು. ಇನ್ನು ಮಮತಾ ಬ್ಯಾನರ್ಜಿ ಅವರು ಯಾವಾಗಲೂ ಟ್ರಿಕ್ಸ್ ಕಾರ್ಡ್ ಪ್ಲೇ ಮಾಡ್ತಾರೆ. ಕೆಲವೊಮ್ಮೆ ಅವರಿಗೆ ಕಾಲು ಮುರಿಯುತ್ತೆ, ಕೆಲವೊಮ್ಮೆ ತಲೆಗೆ ಬ್ಯಾಂಡೇಜ್ ಬರುತ್ತೆ. ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗ್ತಾರೆ, ಚುನಾವಣಾ ಆಯೋಗವನ್ನ ನಿಂದಿಸುತ್ತಾರೆ. ಹೀಗೇ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.