ಕಾರವಾರ,ಮಾ. 29 (DaijiworldNews/TA): ಯಲ್ಲಾಪುರ ತಾಲೂಕಿನ ಕೆರೆಹೊಸಳ್ಳಿಯ ರೀಲ್ಸ್ ಅಜ್ಜಿ ಖ್ಯಾತಿಯ 93 ವರ್ಷದ ಲಕ್ಷ್ಮಿ ನಾಯ್ಕ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ‘ರೀಲ್ಸ್ ಅಜ್ಜಿ’ ಎಂದೇ ಪ್ರಸಿದ್ಧಿ ಪಡೆದಿದ್ದ ಅವರು, ತಮ್ಮ ಮರಿಮೊಮ್ಮಗ ಸೂರಜ್ ಆಚಾರಿ ಜೊತೆ ಸೇರಿ ನೂರಾರು ಕಾಮಿಡಿ ರೀಲ್ಸ್ಗಳಲ್ಲಿ ನಟಿಸಿ ಜನಮನ ಗೆದ್ದಿದ್ದರು. ಕಿವಿ ಸರಿಯಾಗಿ ಕೇಳಿಸದಿದ್ದರೂ, ಕಣ್ಣು ಮಂಜಾಗಿದ್ದರೂ, ಸೂರಜ್ ಹೇಳಿಕೊಟ್ಟಂತೆ ಅವರು ನಟನೆ ಮಾಡುತ್ತಿದ್ದದ್ದು ಎಲ್ಲರ ಮನಸೆಳೆದಿತ್ತು.
ಅವರ ಸರಳತೆ ಮತ್ತು ಮುಗ್ಧ ನಟನೆ ಕಾರಣದಿಂದಲೇ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ಸೂರಜ್ ಹಾಕುವ ಪ್ರತಿಯೊಂದು ರೀಲ್ಸ್ನಲ್ಲೂ ‘ಅಜ್ಜಿ ಎಲ್ಲಿದ್ದಾರೆ?’ ಎಂಬ ಪ್ರಶ್ನೆ ಕೇಳುವಷ್ಟು ಜನರಿಗೆ ಅವರು ಅಚ್ಚುಮೆಚ್ಚಾಗಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿಡಿಯೋಗಳು ವೈರಲ್ ಆಗಿ, ‘ರೀಲ್ಸ್ ಅಜ್ಜಿ’ ಎಂಬ ಹೆಸರೇ ಮನೆಮಾತಾಗಿತ್ತು. ಲಕ್ಷ್ಮಿ ನಾಯ್ಕ ಅವರು ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರರನ್ನು ಅಗಲಿದ್ದಾರೆ. ಇಂದು (ಮಾರ್ಚ್ 29) ಯಲ್ಲಾಪುರದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿತು. ಅವರ ನಿಧನ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಲ್ಲಿ ದುಃಖ ಮೂಡಿಸಿದೆ.