ಲಕ್ನೋ, ಮಾ. 29 (DaijiworldNews/TA): ತಾಂತ್ರಿಕ ದೋಷದಿಂದ ಉತ್ತರ ಪ್ರದೇಶ ರಾಜ್ಯದ ಮೈನ್ಪುರಿ ಜಿಲ್ಲೆಯ ಮಹಿಳೆಯೊಬ್ಬರ ಖಾತೆಗೆ ಸುಮಾರು 10 ಕೋಟಿ ರೂಪಾಯಿ ಜಮೆಯಾಗಿದ್ದ ಘಟನೆ ಬೆಳಕಿಗೆ ಬಂದಿದೆ. ಆದರೆ ಆ ಹಣವನ್ನು ಬಳಸದೇ ಬ್ಯಾಂಕ್ಗೆ ಮರಳಿಸಲು ಮುಂದಾದ ಮಹಿಳೆಯ ಪ್ರಾಮಾಣಿಕತೆ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.

ಬಿಚ್ವಾನ್ ಪ್ರದೇಶದ ದೇವ್ಗಂಜ್ ಗ್ರಾಮದ ರೈತ ಪರಸ್ಭಾನ್ ಬಹೇಲಿಯಾ ಅವರ ಪತ್ನಿ ರೀಟಾ ಅವರ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ ಈ ಹಣ ಜಮೆಯಾಗಿತ್ತು. ನವರಾತ್ರಿ ಸಮಯದಲ್ಲಿ ಹಣ ತೆಗೆಯಲು ಅವರು ಸ್ಥಳೀಯ ಬ್ಯಾಂಕ್ಗೆ ತೆರಳಿದಾಗ ಶಾಖೆ ಮುಚ್ಚಿತ್ತು. ನಂತರ ಹತ್ತಿರದ ಎಟಿಎಂನಲ್ಲಿ ಬ್ಯಾಲೆನ್ಸ್ ಪರಿಶೀಲಿಸಿದಾಗ ಖಾತೆಯಲ್ಲಿ ರೂ. 9,99,49,588 ಇರುವುದಾಗಿ ಕಂಡುಬಂದಿದೆ.
ಈ ಭಾರೀ ಮೊತ್ತ ನೋಡಿ ದಂಪತಿ ಅಚ್ಚರಿಗೊಂಡು, ಮತ್ತೊಂದು ಎಟಿಎಂನಲ್ಲಿ ಪರಿಶೀಲಿಸಿದ್ದು, ಈ ಸಂದರ್ಭವನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆ ವೀಡಿಯೋ ವೈರಲ್ ಆಗಿದೆ. ಖಾತೆಯಲ್ಲಿ ಅಪಾರ ಮೊತ್ತ ತೋರಿದ್ದರೂ, ರೀಟಾ ಯಾವುದೇ ಹಣವನ್ನು ತೆಗೆಯದೇ, ಕುಟುಂಬಸ್ಥರಿಗೂ ಹಣ ಮುಟ್ಟಬಾರದೆಂದು ಸೂಚಿಸಿದ್ದಾರೆ. ಬಳಿಕ ಬ್ಯಾಂಕ್ಗೆ ಮಾಹಿತಿ ನೀಡಿ ಹಣವನ್ನು ಹಿಂತಿರುಗಿಸಲು ಮನವಿ ಮಾಡಿದ್ದಾರೆ.
ಬ್ಯಾಂಕ್ ಆಫ್ ಇಂಡಿಯಾದ ಕರೀಮ್ಗಂಜ್ ಶಾಖೆಯ ವ್ಯವಸ್ಥಾಪಕ ರಿಷಿಕಾಂತ್ ಪಾಂಡೆ ಅವರು, ತಾಂತ್ರಿಕ ದೋಷ ಅಥವಾ ವಹಿವಾಟಿನ ವೇಳೆ ತಪ್ಪಾಗಿ ಹಣ ಜಮೆಯಾಗಿರಬಹುದು ಎಂದು ತಿಳಿಸಿದ್ದಾರೆ. ಪ್ರಕರಣವನ್ನು ಪರಿಶೀಲಿಸಲಾಗುತ್ತಿದೆ. ರೀಟಾ ಹಾಗೂ ಅವರ ಕುಟುಂಬದ ಪ್ರಾಮಾಣಿಕ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.