ಕೇರಳ, ಏ. 15 (DaijiworldNews/TA): ಭಾರತೀಯ ಸಂಸ್ಕೃತಿಯಲ್ಲಿ ಹೊಸ ವರ್ಷದ ಆರಂಭವನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಅವುಗಳಲ್ಲಿ ಕರಾವಳಿ ಕರ್ನಾಟಕ ಹಾಗೂ ಕೇರಳದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲ್ಪಡುವ ಹಬ್ಬವೇ ವಿಷು. ಸೂರ್ಯನು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸುವ ಈ ಶುಭಸಂದರ್ಭವು ಹೊಸ ಆರಂಭದ ಸೂಚಕವಾಗಿದ್ದು, ಜೀವನದಲ್ಲಿ ಸಮತೋಲನ ಮತ್ತು ಸಮೃದ್ಧಿಯ ಸಂದೇಶ ನೀಡುತ್ತದೆ. ‘ವಿಷು’ ಎಂಬ ಪದಕ್ಕೆ ಸಂಸ್ಕೃತದಲ್ಲಿ ‘ಸಮಾನ’ ಎಂಬ ಅರ್ಥವಿದ್ದು, ಈ ದಿನ ಹಗಲು ಮತ್ತು ರಾತ್ರಿಯ ಅವಧಿ ಸಮಾನವಾಗಿರುತ್ತದೆ ಎನ್ನುವ ಭೌಗೋಳಿಕ ನಂಬಿಕೆಯಿಂದ ಈ ಹೆಸರು ಬಂದಿದೆ. ಕರಾವಳಿ ಭಾಗಗಳಲ್ಲಿ ಇದನ್ನು ‘ಬಿಸು’ ಎಂದೂ ಕರೆಯುತ್ತಾರೆ.

ಹಬ್ಬದ ಪ್ರಮುಖ ಆಕರ್ಷಣೆ – ವಿಷು ಕಣಿ : ವಿಷು ಹಬ್ಬದ ಪ್ರಮುಖ ಆಕರ್ಷಣೆ ‘ವಿಷು ಕಣಿ’. ಹಬ್ಬದ ದಿನ ಬೆಳಿಗ್ಗೆ ಕಣ್ಣು ತೆರೆದ ತಕ್ಷಣ ಕಾಣುವ ಮೊದಲ ದೃಶ್ಯ ಶುಭಕರವಾಗಿರಬೇಕು ಎಂಬುದು ಇದರ ಹಿಂದೆ ಇರುವ ನಂಬಿಕೆ. ದೇವರ ಮನೆಯಲ್ಲಿ ಅಕ್ಕಿ, ತೆಂಗಿನಕಾಯಿ, ಸೌತೆಕಾಯಿ, ಹಣ್ಣು-ಹಂಪಲು, ಚಿನ್ನ-ಬೆಳ್ಳಿ ನಾಣ್ಯಗಳು ಹಾಗೂ ಕನ್ನಡಿಯನ್ನು ಅಲಂಕರಿಸಿ ಇಡಲಾಗುತ್ತದೆ. ಈ ಅಲಂಕಾರದಲ್ಲಿ ಹಳದಿ ಬಣ್ಣದ ‘ಕಣಿಕೊನ್ನ’ (ಕರ್ಣಿಕಾರ) ಹೂವುಗಳಿಗೆ ವಿಶೇಷ ಮಹತ್ವವಿದೆ. ಮನೆಯ ಹಿರಿಯರು ಕಿರಿಯರ ಕಣ್ಣುಗಳನ್ನು ಮುಚ್ಚಿ ಕರೆತಂದು ಈ ಕಣಿಯನ್ನು ತೋರಿಸುವುದು ಸಂಪ್ರದಾಯ.
‘ವಿಷು ಕೈನೀಟಂ’ – ಆಶೀರ್ವಾದದ ರೂಪ : ವಿಷು ದಿನದ ಮತ್ತೊಂದು ಪ್ರಮುಖ ಆಚರಣೆ ‘ವಿಷು ಕೈನೀಟಂ’. ಮನೆಯ ಹಿರಿಯರು ಕಿರಿಯರಿಗೆ ಹಣವನ್ನು ನೀಡಿ ಆಶೀರ್ವದಿಸುವುದು ಇದರ ವೈಶಿಷ್ಟ್ಯ. ಇದು ಕೇವಲ ಹಣ ಕೊಡುವ ಪದ್ಧತಿಯಲ್ಲ, ಮುಂದಿನ ವರ್ಷ ಸಮೃದ್ಧಿ ಹಾಗೂ ಸುಖಶಾಂತಿ ನೆಲೆಸಲಿ ಎಂಬ ಹಾರೈಕೆಯ ಸಂಕೇತವಾಗಿದೆ.
ರುಚಿಕರ ವಿಷು ಸದ್ಯ : ವಿಷು ಹಬ್ಬದ ಊಟವು ಜೀವನದ ತತ್ವವನ್ನು ಪ್ರತಿಬಿಂಬಿಸುತ್ತದೆ. ಸಿಹಿ, ಕಹಿ, ಹುಳಿ ಮತ್ತು ಉಪ್ಪು ರುಚಿಗಳ ಸಮತೋಲನವು ಜೀವನದ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂದೇಶ ನೀಡುತ್ತದೆ. ‘ವಿಷು ಕಂಜಿ’ (ಗಂಜಿ) ಮತ್ತು ಪಾಯಸ ಈ ಹಬ್ಬದ ಪ್ರಮುಖ ಆಹಾರಗಳಾಗಿವೆ.
ಸಾಂಸ್ಕೃತಿಕ ಮಹತ್ವ : ಕೃಷಿ ಪ್ರಧಾನ ಭಾರತದ ಸಂಸ್ಕೃತಿಯಲ್ಲಿ ವಿಷು ಹಬ್ಬವು ಸುಗ್ಗಿ ಕಾಲದ ಅಂತ್ಯ ಮತ್ತು ಹೊಸ ಬಿತ್ತನೆಯ ಆರಂಭದ ಸಂಕೇತವಾಗಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಕಣಿಕೊನ್ನ ಹೂ : ಹಾಗಿದ್ರೆ ಕಣಿಕೊನ್ನ ಹೂವಿಗೂ ವಿಷುವಿಗೂ ಇರುವ ಪವಿತ್ರ ಸಂಬಂಧ ಎಂತಹದ್ದು ಗೊತ್ತಾ ಅದರ ವಿಚಾರವೂ ಇಲ್ಲಿದೆ. ವಿಷು ಹಬ್ಬದ ಆಚರಣೆಯಲ್ಲಿ ಕಾಣಿಸುವ ಹಳದಿ ಬಣ್ಣದ ಕೊನ್ನಪೂ (ಕಣಿಕೊನ್ನ) ಹೂವುಗಳಿಗೆ ವಿಶೇಷ ಸ್ಥಾನಮಾನವಿದೆ. ಈ ಹೂವು ಕೇವಲ ಅಲಂಕಾರವಲ್ಲ, ಅದಕ್ಕೆ ಸಂಬಂಧಿಸಿದ ಪೌರಾಣಿಕ ಕಥೆ ಭಕ್ತಿಯೂ, ಸ್ನೇಹವೂ ಹಾಗೂ ದೈವೀ ಚಮತ್ಕಾರವೂ ಒಳಗೊಂಡಿದೆ.
ಶ್ರೀಕೃಷ್ಣನೊಂದಿಗೆ ಸೇರಿದ ಜನಪ್ರಿಯ ಕಥೆ : ಕೇರಳದಲ್ಲಿ ಪ್ರಸಿದ್ಧವಾಗಿರುವ ಒಂದು ಸುಂದರ ಕಥೆಯ ಪ್ರಕಾರ, ಒಮ್ಮೆ ಒಬ್ಬ ಬಡ ಹುಡುಗ ತನ್ನ ಬಳಿ ಇದ್ದ ಸಣ್ಣ ಚಿನ್ನದ ಹಾರವನ್ನು ಶ್ರೀಕೃಷ್ಣನಿಗೆ ಭಕ್ತಿಯಿಂದ ಅರ್ಪಿಸಿದನು. ಭಗವಂತನು ಅದನ್ನು ಸಂತೋಷದಿಂದ ಸ್ವೀಕರಿಸಿ ಧರಿಸಿದನು.
ನಂತರ ಕೃಷ್ಣನು ತನ್ನ ಸ್ನೇಹಿತನನ್ನು ಭೇಟಿ ಮಾಡಲು ಹೋದಾಗ, ಆ ಹುಡುಗನಿಗೆ ಆ ಹಾರ ತುಂಬಾ ಇಷ್ಟವಾಯಿತು. ಸ್ನೇಹದ ಚಿಹ್ನೆಯಾಗಿ ಕೃಷ್ಣನು ಅದನ್ನು ಅವನಿಗೆ ಉಡುಗೊರೆಯಾಗಿ ನೀಡಿದನು. ಆದರೆ, ದೇವಸ್ಥಾನದಲ್ಲಿ ಹಾರ ಕಾಣೆಯಾಗಿರುವುದು ತಿಳಿದಾಗ, ಆ ಹುಡುಗನ ಮೇಲೆ ಕಳ್ಳತನದ ಆರೋಪ ಹೊರಿಸಲಾಯಿತು. ಅವನು ಹೇಳಿದ ಮಾತುಗಳನ್ನು ಯಾರೂ ನಂಬಲಿಲ್ಲ.
ಈ ಸಂದರ್ಭದಲ್ಲಿ ಕೃಷ್ಣನು ತನ್ನ ದೈವೀ ಶಕ್ತಿಯನ್ನು ತೋರಿಸಿದನು. ತನ್ನ ಕುತ್ತಿಗೆಯಿಂದ ಮತ್ತೊಂದು ಹಾರವನ್ನು ತೆಗೆದು ಹೊರಗೆ ಎಸೆದನು. ಅದು ಹತ್ತಿರದಲ್ಲಿದ್ದ ಒಂದು ಮರದ ಮೇಲೆ ಬಿದ್ದು, ಆ ಮರವು ಕ್ಷಣಾರ್ಧದಲ್ಲಿ ಚಿನ್ನದ ಹೂವುಗಳಿಂದ ತುಂಬಿತು. ಆ ಮರವೇ ಇಂದಿನ ಕಣಿಕೊನ್ನ (ಕೊನ್ನಮರ) ಎಂದು ನಂಬಲಾಗಿದೆ. ಅದರ ಹಳದಿ ಹೂವುಗಳು ಚಿನ್ನದಂತೆ ಹೊಳೆಯುವುದರಿಂದ, ಅವುಗಳನ್ನು ಕೃಷ್ಣನ ದಿವ್ಯತೆ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
ವಿಷು ಕಣಿಯಲ್ಲಿ ಕೊನ್ನಪೂ ಮಹತ್ವ : ಈ ಕಥೆಯ ಹಿನ್ನೆಲೆಯಿಂದಲೇ ವಿಷು ದಿನದ ‘ವಿಷು ಕಣಿ’ ಅಲಂಕಾರದಲ್ಲಿ ಕೊನ್ನಪೂ ಹೂವುಗಳನ್ನು ಕಡ್ಡಾಯವಾಗಿ ಬಳಸಲಾಗುತ್ತದೆ. ವಿಶೇಷವಾಗಿ ಶ್ರೀಕೃಷ್ಣನ ವಿಗ್ರಹದ ಸುತ್ತಲೂ ಈ ಹೂಗಳನ್ನು ಇಡುವುದು ಶುಭಕರವೆಂದು ನಂಬಿಕೆ ಇದೆ.
ಕೊನ್ನಪೂವು ವಿಷು ಹಬ್ಬದಲ್ಲಿ ಕೇವಲ ಹೂವಲ್ಲ , ಅದು ಭಕ್ತಿ, ಸ್ನೇಹ, ದೈವೀ ಅನುಗ್ರಹ ಮತ್ತು ಸಮೃದ್ಧಿಯ ಪ್ರತೀಕ. ಈ ಹೂವುಗಳ ಸಾನ್ನಿಧ್ಯವು ಮನೆಗೆ ಶುಭವನ್ನು ತರುತ್ತದೆ ಎಂಬ ನಂಬಿಕೆ ಜನರಲ್ಲಿ ಬೇರೂರಿದೆ. ವಿಷು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಕುಟುಂಬದ ಸದಸ್ಯರು ಒಂದೆಡೆ ಸೇರಿ ಸಂಭ್ರಮಿಸುವ ಹಬ್ಬವೂ ಹೌದು. ಇದು ಸಂಬಂಧಗಳನ್ನು ಗಟ್ಟಿಗೊಳಿಸಿ, ಜೀವನದಲ್ಲಿ ಹೊಸ ಭರವಸೆ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿದೆ.
- ತಾರಾನವೀನ್ ಶೆಟ್ಟಿ ವರ್ಕಾಡಿ