ಮಂಡ್ಯ, ಏ. 15 (DaijiworldNews/TA): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ದ್ರಾವಿಡ-ಹೊಯ್ಸಳ ಶೈಲಿಯ ಶಿಲ್ಪಕಲೆಯಿಂದ ನಿರ್ಮಿಸಲಾದ ಭವ್ಯ ‘ಶ್ರೀಗುರು ಭೈರವೈಕ್ಯ ಮಂದಿರ’ವನ್ನು ಲೋಕಾರ್ಪಣೆಗೊಳಿಸಿದರು.

ಮಠಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದ ಬಳಿಕ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಈ ವೇಳೆ ಮಠದ ಶ್ರೀಗಳು ಪ್ರಧಾನಿಗೆ ತಿಲಕವಿಟ್ಟು ಆಶೀರ್ವದಿಸಿದರು. ನಂತರ ಅವರು ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳು ಅವರ ಭೈರವೈಕ್ಯ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿ, ಮಂದಿರದ ಒಳಭಾಗವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಹಾಗೂ ಕರ್ನಾಟಕ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮಂಡ್ಯದ ಆದಿಚುಂಚನಗಿರಿಯಲ್ಲಿರುವ ಪರಮಪೂಜ್ಯ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳು ಅವರ ಅಂತ್ಯಸಂಸ್ಕಾರದ ಸ್ಥಳದಲ್ಲೇ ಈ ಭೈರವೈಕ್ಯ ಮಂದಿರವನ್ನು ನಿರ್ಮಿಸಲಾಗಿದ್ದು, ಸುಮಾರು 26,250 ಚದರ ಅಡಿ ವಿಸ್ತೀರ್ಣದಲ್ಲಿ ದ್ರಾವಿಡ ಮತ್ತು ಹೊಯ್ಸಳ ಶೈಲಿಯ ಅದ್ಭುತ ಶಿಲ್ಪಕಲೆಯೊಂದಿಗೆ ತಲೆ ಎತ್ತಿದೆ. ಮಂದಿರ ನಿರ್ಮಾಣಕ್ಕೆ ಅಂದಾಜು ರೂ. 80 ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಭವ್ಯ ಮಂದಿರವು ಕೇವಲ ಸ್ಮಾರಕವಲ್ಲ, ಭಕ್ತರ ಪಾಲಿಗೆ ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿದ್ದು, ಪರಂಪರೆ, ಶಿಲ್ಪಕಲೆ ಮತ್ತು ಭಕ್ತಿಯ ಸಮನ್ವಯವನ್ನು ಪ್ರತಿಬಿಂಬಿಸುತ್ತದೆ.