ನವದೆಹಲಿ, ಏ. 15 (DaijiworldNews/AA): ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಸಿಕ್ಕಿದ್ದ ತಾತ್ಕಾಲಿಕ ರಿಲೀಫ್ಗೆ ಈಗ ಸುಪ್ರೀಂ ಕೋರ್ಟ್ ತಡೆ ನೀಡಿದೆ. ತೆಲಂಗಾಣ ಹೈಕೋರ್ಟ್ ಏ.10 ರಂದು ನೀಡಿದ್ದ ಒಂದು ವಾರದ ಸೀಮಿತ ನಿರೀಕ್ಷಣಾ ಜಾಮೀನು ಆದೇಶಕ್ಕೆ ಕೋರ್ಟ್ ತಡೆ ನೀಡಿದೆ.

ಅಸ್ಸಾಂ ಪೊಲೀಸರು ದಾಖಲಿಸಿರುವ ಮಾನನಷ್ಟ, ನಕಲಿ ದಾಖಲೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ. ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎ.ಎಸ್. ಚಂದೂರ್ಕರ್ ಅವರ ಪೀಠ ಈ ಮಧ್ಯಂತರ ಆದೇಶ ಹೊರಡಿಸಿದೆ. ವಿಚಾರಣೆ ವೇಳೆ ಅಸ್ಸಾಂ ಪೊಲೀಸರ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪವನ್ ಖೇರಾ ಅವರು ನಕಲಿ ದಾಖಲೆಗಳನ್ನು ನೀಡಿ ತೆಲಂಗಾಣ ಹೈಕೋರ್ಟ್ ನ ನ್ಯಾಯವ್ಯಾಪ್ತಿಯನ್ನು ದುರುಪಯೋಗ ಮಾಡಿಕೊಂಡು ಜಾಮೀನು ಪಡೆದಿದ್ದಾರೆ ಎಂದು ವಾದ ಮಂಡಿಸಿದರು.
ಪವನ್ ಖೇರಾ ಅವರು ತಮ್ಮ ಪತ್ನಿಯ ಆಧಾರ್ ಕಾರ್ಡ್ ಬಳಸಿಕೊಂಡು ತೆಲಂಗಾಣದಲ್ಲಿ ವಾಸಿಸುತ್ತಿರುವಂತೆ ತೋರಿಸಿದ್ದಾರೆ. ಆದರೆ ಅದೇ ದಾಖಲೆಗಳಲ್ಲಿ ಅವರ ಪತ್ನಿ ದೆಹಲಿಯಲ್ಲಿ ವಾಸಿಸುತ್ತಿರುವುದು ಕಂಡು ಬರುತ್ತದೆ ಎಂದು ತಿಳಿಸಿದರು. ಒಬ್ಬ ವ್ಯಕ್ತಿ ಬೇರೆ ಬೇರೆ ರಾಜ್ಯಗಳಲ್ಲಿ ಆಸ್ತಿ ಹೊಂದಿರುವುದರಿಂದ, ತಾನು ಇಚ್ಛಿಸಿದ ನ್ಯಾಯವ್ಯಾಪ್ತಿಯಲ್ಲಿ ಜಾಮೀನು ಪಡೆಯಲು ಅವಕಾಶ ಸಿಗುವುದಿಲ್ಲ. ಇದು ಕಾನೂನಿನ ದುರುಪಯೋಗ ಎಂದು ತುಷಾರ್ ಮೆಹ್ತಾ ಕೋರ್ಟ್ ಗೆ ತಿಳಿಸಿದರು.
ಆಧಾರ್ ಕಾರ್ಡ್ನ ಮುಂಭಾಗದಲ್ಲಿ ಖೇರಾ ಹೆಸರು ಇದ್ದರೂ, ಹಿಂಭಾಗದಲ್ಲಿ ಅವರ ಪತ್ನಿಯ ವಿಳಾಸ ಉಲ್ಲೇಖವಾಗಿದೆ. ಹೀಗಾಗಿ ನಕಲಿ ದಾಖಲೆ ಬಳಸಿ ತೆಲಂಗಾಣ ಹೈಕೋರ್ಟ್ ನ್ಯಾಯವ್ಯಾಪ್ತಿಯ ಲಾಭ ಪಡೆದಿರುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ತಿಳಿಸಿದೆ. ಈ ಹಿನ್ನೆಲೆ ನೋಟಿಸ್ ಜಾರಿ ಮಾಡಿದ ಸುಪ್ರೀಂ, ತೆಲಂಗಾಣ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿದೆ. ಇನ್ನು ಪವನ್ ಖೇರಾ ಅವರು ಅಸ್ಸಾಂ ನ್ಯಾಯವ್ಯಾಪ್ತಿಯ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಕೋರ್ಟ್ ಹೇಳಿದೆ. ಮೂರು ವಾರಗಳಲ್ಲಿ ನೋಟಿಸ್ಗೆ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಲಾಗಿದೆ.