ಅಯೋಧ್ಯೆ, ಏ. 16 (DaijiworldNews/AA): ಯುಪಿಎಸ್ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಒಂದಾಗಿದೆ. ಈ ಪರೀಕ್ಷೆಯನ್ನು ಕೆಲವರು ತಮ್ಮ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಲು ಸಫಲರಾದರೆ, ಇನ್ನು ಕೆಲವರು ಎರಡು-ಮೂರು ಪ್ರಯತ್ನಗಳ ನಂತರ ಉತ್ತೀರ್ಣರಾಗುವಲ್ಲಿ ಯಶಸ್ವಿಯಾಗುತ್ತಾರೆ. ಹೀಗೆ ತಮ್ಮ ಮೂರನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರಣಯ್ ಮಿತ್ತಲ್ ಅವರ ಯಶೋಗಾಥೆ ಇದು.

ಮೂಲತಃ ಸಹರಾನ್ಪುರದವರಾದ ಪ್ರಣಯ್ ಮಿತ್ತಲ್ ಅವರು ಅಯೋಧ್ಯೆಯ ಪಂಜಾಬ್ ನ್ಯಾಷನಲ್ ಬ್ಯಾಂಕ್ನ ವಿಭಾಗೀಯ ಮುಖ್ಯಸ್ಥರಾದ ನೀರಜ್ ಕುಮಾರ್ ಅವರ ಪುತ್ರ. ಅವರು ಅಯೋಧ್ಯೆ ಜಿಲ್ಲೆಯಲ್ಲೇ ಉಳಿದು ಪರೀಕ್ಷೆಗೆ ತಯಾರಿ ನಡೆಸಿದ್ದರು.
2024ರಲ್ಲಿ ಮೂರನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಪ್ರಣಯ್ ಮಿತ್ತಲ್ ಅವರು ಅಖಿಲ ಭಾರತ 85ನೇ ರ್ಯಾಂಕ್ ಪಡೆದು ಅಮೋಘ ಸಾಧನೆ ಮಾಡಿದ್ದಾರೆ. 2025ರಲ್ಲಿ ಪ್ರಕಟವಾದ ಫಲಿತಾಂಶದಲ್ಲಿ ಉತ್ತಮ ರ್ಯಾಂಕ್ ಪಡೆದ ಅವರು, ಭಾರತೀಯ ಪೊಲೀಸ್ ಸೇವೆಗೆ ಆಯ್ಕೆಯಾಗಿದ್ದಾರೆ.
ಪ್ರಣಯ್ ಅವರ ಈ ಯಶಸ್ಸಿನ ಹಿಂದೆ ಐದು ವರ್ಷಗಳ ಸುದೀರ್ಘ ಪರಿಶ್ರಮ, ಆತ್ಮವಿಶ್ವಾಸ ಮತ್ತು ವೈಫಲ್ಯಗಳಿಂದ ಕಲಿತ ಪಾಠಗಳಿವೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಅವರು, 'ನೆಟ್ ಜೆಆರ್ಎಫ್' ಅರ್ಹತೆ ಮತ್ತು ಪೇಟೆಂಟ್ ಕೂಡ ಹೊಂದಿದ್ದಾರೆ. ಇಷ್ಟೆಲ್ಲಾ ಅರ್ಹತೆಗಳಿದ್ದರೂ ಸಹ ಅವರು ಯುಪಿಎಸ್ಸಿ ಪರೀಕ್ಷೆಯನ್ನು ಬರೆಯಲು ನಿರ್ಧರಿಸಿದರು.ಪ್ರಣಯ್ ಮಿತ್ತಲ್ ಅವರ ಕಠಿಣ ಪರಿಶ್ರಮದ ಫಲವಾಗಿ ಇಂದು ಐಪಿಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.