ಧಾರವಾಡ, ಏ. 16 (DaijiworldNews/AK): ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ವಿನಯ್ ಕುಲಕರ್ಣಿ ಯೋಗೇಶ್ಗೌಡ ಕೊಲೆ ಕೇಸಲ್ಲಿ ಅಪರಾಧಿಯಾಗಿದ್ದಾರೆ. ಈ ಸಂಬಂಧ ನ್ಯಾಯಾಲಯ ಇಂದು (ಏ.16) ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.

10 ವರ್ಷಗಳ ನಿರಂತರ ತನಿಖೆ, ವಿಚಾರಣೆ ಬಳಿಕ ಜನಪ್ರತಿನಿಧಿಗಳ ಕೋರ್ಟ್ ಕೊಲೆ, ಕ್ರಿಮಿನಲ್ ಸಂಚು, ಸಾಕ್ಷ್ಯನಾಶ, ಮಾರಕಾಸ್ತ್ರಗಳಿಂದ ಹಲ್ಲೆ, ಅಕ್ರಮ ಕೂಟ ಆರೋಪದಡಿ ದೋಷಿ ಎಂದು ಆದೇಶಿಸಿದೆ.
ಅದರಂತೆ ಪ್ರಕರಣ ಸಂಬಂಧ ಇಂದು ಶಿಕ್ಷೆ ಪ್ರಮಾಣವನ್ನು ಪ್ರಕಟ ಮಾಡಲಿದೆ.
2016ರಲ್ಲಿ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆಯಾಗಿತ್ತು. ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸೇರಿ ಒಟ್ಟು 21 ಮಂದಿ ಮೇಲೆ ಆರೋಪ ಕೇಳಿ ಬಂದಿತ್ತು. ಪ್ರಕರಣವನ್ನು ಬಿಜೆಪಿ ಸರ್ಕಾರ ಸಿಬಿಐಗೆ ಒಪ್ಪಿಸಿತ್ತು. ಇಂಚಿಂಚು ತನಿಖೆ ನಡೆಸಿದ್ದ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿತ್ತು.
ಇದೀಗ ಎ15 ವಿನಯ್ ಕುಲಕರ್ಣಿ ಸೇರಿ 17 ಮಂದಿಯನ್ನು ಕೋರ್ಟ್ ಅಪರಾಧಿಗಳು ಅಂತ ಹೇಳಿದೆ. ಉಳಿದ ಸೋಮಶೇಖರ್ ನ್ಯಾಮಗೌಡ ಹಾಗೂ ವಾಸುದೇವ್ ನಿಲೇಕಣಿಯನ್ನ ಕೋರ್ಟ್ ಖುಲಾಸೆಗೊಳಿಸಿದೆ. ಇನ್ನು ಇಬ್ಬರು ನಿರ್ದೋಷಿಗಳನ್ನು ಬಿಟ್ಟು ಉಳಿದವರನ್ನು ಸಿಬಿಐ ವಶಕ್ಕೆ ಪಡೆದಿದ್ದಾರೆ.
ಇನ್ನು, ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ ಬಗ್ಗೆ ತನಿಖೆ ನಡೆಸಲೂ ರಿಜಿಸ್ಟ್ರಾರ್ಗೆ ಕೋರ್ಟ್ ಸೂಚನೆ ನೀಡಿದೆ. ಅದರ ಜೊತೆಗೆ ಇಂದು ಎಲ್ಲಾ ಆರೋಪಿಗಳು ಕೋರ್ಟ್ಗೆ ಹಾಜರಾಗಲಿದ್ದು, ಜಡ್ಜ್ ಶಿಕ್ಷೆ ಪ್ರಮಾಣ ಪ್ರಕಟಿಸಲಿದ್ದಾರೆ.