ಬೆಂಗಳೂರು, ಏ. 16 (DaijiworldNews/AK): ಪ್ರಸಕ್ತ ಸಾಲಿನಿಂದಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸುವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ ಗ್ರೇಡ್ ಬದಲಿಗೆ ಅಂಕಗಳನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಗ್ರೇಡ್ ನೀಡುವ ಬಗ್ಗೆ ಪ್ರಶ್ನಿಸಿ ಚಿಕ್ಕಮಗಳೂರಿನ ಸಹನಾ ಆರ್. ನಾಯ್ಕ ಸೇರಿ ಮೂವರು ವಿದ್ಯಾರ್ಥಿಗಳು ತಕರಾರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅವರ ಏಕಸದಸ್ಯ ಪೀಠವು ಗ್ರೇಡ್ ಬದಲಿಗೆ ಅಂಕಗಳನ್ನು ನೀಡುವಂತೆ ಸರ್ಕಾರಕ್ಕೆ ಸೂಚಿಸಿ, ಅರ್ಜಿ ಇತ್ಯರ್ಥಪಡಿಸಿದೆ.
ಅರ್ಜಿದಾರರ ಪರ ವಕೀಲ ಆರ್.ವಿ.ನಾಯ್ಕ ವಾದ ಮಂಡಿಸಿ, 2025-2026ನೇ ಸಾಲಿನಿಂದಲೇ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವುದಾಗಿ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು 2026ರ ಮಾ.28ರಂದು ಹೇಳಿಕೆ ನೀಡಿದ್ದಾರೆ. ಅಲ್ಲದೇ ಇದಕ್ಕೂ ಮುನ್ನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಮುಖ್ಯಸ್ಥರು 2024ರ ಅ.18 ಮತ್ತು 2025ರ ಅ.28ರಂದು ಮಾರ್ಗಸೂಚಿ ಹಾಗೂ ಸುತ್ತೋಲೆ ಹೊರಡಿಸಿ, ಎಸ್ಎಸ್ಎಲ್ಸಿ ಹಿಂದಿ ಹಾಗೂ ಇತರೆ ತೃತೀಯ ಭಾಷಾ ವಿಷಯಗಳಿಗೆ 100 ಅಂಕ ನೀಡಬೇಕು. ಲಿಖಿತ ಪರೀಕ್ಷೆಯ ಮೌಲ್ಯಮಾಪನದಲ್ಲಿ 80 ಅಂಕ, ಶಾಲಾ ಆಂತರಿಕ ಪರೀಕ್ಷೆ 20 ಅಂಕ ನೀಡಬೇಕು ಎಂದು ಸೂಚಿಸಿದ್ದಾರೆ. ಆದರೆ, ಕೊನೆ ಹಂತದಲ್ಲಿ ಪರೀಕ್ಷೆ ನಡೆಯುತ್ತಿರುವ ಸಮಯದಲ್ಲಿ ಅಂಕಗಳ ಬದಲಿಗೆ ಗ್ರೇಡ್ ನೀಡುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ ಎಂದು ಆಕ್ಷೇಪಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಹಾಲಿ ಇರುವ ನಿಯಮಗಳು ಹಾಗೂ ಮಾರ್ಗಸೂಚಿಯಂತೆ 2025-2026ನೇ ಸಾಲಿನಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ ಗ್ರೇಡ್ ಬದಲಿಗೆ ಅಂಕಗಳನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.