ನವದೆಹಲಿ, ಏ. 16 (DaijiworldNews/TA): ಮಹಿಳಾ ಮೀಸಲಾತಿ ಮಸೂದೆ ಕುರಿತು ನಡೆದ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಈ ಮಸೂದೆಯನ್ನು ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ “ಐತಿಹಾಸಿಕ ಹೆಜ್ಜೆ” ಎಂದು ಬಣ್ಣಿಸಿದರು. ಮಹಿಳಾ ಮೀಸಲಾತಿ ವಿಚಾರಕ್ಕೆ ರಾಜಕೀಯ ಬಣ್ಣ ಬಳಿಯುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಈ ಕಾಯ್ದೆಯನ್ನು 25–30 ವರ್ಷಗಳ ಹಿಂದೆಯೇ ಜಾರಿಗೊಳಿಸಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು. “ಒಂದು ಪಕ್ಷವನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಪಕ್ಷಗಳ ನಾಯಕರನ್ನು ನಾನು ಭೇಟಿಯಾದೆ. ಯಾರೂ ತಾತ್ವಿಕವಾಗಿ ಈ ಮಸೂದೆಗೆ ವಿರೋಧ ವ್ಯಕ್ತಪಡಿಸಲಿಲ್ಲ. ಆದರೆ ನಂತರ ರಾಜಕೀಯ ದೃಷ್ಟಿಕೋನದಿಂದ ವಿರೋಧ ವ್ಯಕ್ತವಾಗುತ್ತಿದೆ. ಎಲ್ಲರೂ ಒಟ್ಟಾಗಿ ಇದನ್ನು ಜಾರಿಗೊಳಿಸಿದರೆ, ದೇಶಕ್ಕೆ ಮಾಡಿದ ಸೇವೆಗೆ ಇತಿಹಾಸ ನಮ್ಮನ್ನು ನೆನಪಿಸಿಕೊಳ್ಳುತ್ತದೆ” ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಅವರು, “ನಾವು ಭಾರತೀಯರು ರಾಷ್ಟ್ರಕ್ಕೆ ಹೊಸ ದಿಕ್ಕು ನೀಡಲು ಒಗ್ಗೂಡುತ್ತಿದ್ದೇವೆ. ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ಅರ್ಥಪೂರ್ಣ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಭಾರತ ಪ್ರಜಾಪ್ರಭುತ್ವದ ತಾಯಿ. ರಾಷ್ಟ್ರ ನಿರ್ಮಾಣದ ನಿರ್ಧಾರಗಳಲ್ಲಿ ದೇಶದ ಅರ್ಧ ಜನಸಂಖ್ಯೆಯಾಗಿರುವ ಮಹಿಳೆಯರನ್ನು ಸೇರಿಸಿಕೊಳ್ಳುವ ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ” ಎಂದು ಹೇಳಿದರು.
ಮಸೂದೆ ಅಂಗೀಕಾರವಾದರೆ ಅದು ಒಂದು ಪಕ್ಷದ ಜಯವಲ್ಲ, ಇಡೀ ರಾಷ್ಟ್ರದ ಸಾಮೂಹಿಕ ಯಶಸ್ಸಾಗಲಿದೆ ಎಂದು ಮೋದಿ ಹೇಳಿದರು. “ಹೀಗಾಗಿ ಮಹಿಳಾ ಮೀಸಲಾತಿ ಮಸೂದೆಗೆ ರಾಜಕೀಯ ಬಣ್ಣ ನೀಡುವ ಅಗತ್ಯವಿಲ್ಲ” ಎಂದು ಅವರು ಪುನರುಚ್ಚರಿಸಿದರು.