ನವದೆಹಲಿ, ಏ. 16 (DaijiworldNews/TA): ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿ ಭಾರೀ ಅನಾಹುತ ತಪ್ಪಿದ ಘಟನೆ ನಡೆದಿದೆ.

ಟ್ಯಾಕ್ಸಿವೇಯಲ್ಲಿ ನಿಂತಿದ್ದ ಆಕಾಸ ಏರ್ ವಿಮಾನಕ್ಕೆ ಸ್ಪೈಸ್ಜೆಟ್ ವಿಮಾನ ಡಿಕ್ಕಿ ಹೊಡೆದಿದೆ. ಚಲಿಸುತ್ತಿದ್ದ ಸ್ಪೈಸ್ಜೆಟ್ ವಿಮಾನದ ರೆಕ್ಕೆ, ನಿಂತಿದ್ದ ಆಕಾಸ ಏರ್ ವಿಮಾನದ ಎಡ ರೆಕ್ಕೆಗೆ ತಗುಲಿದ್ದು, ಎರಡೂ ವಿಮಾನಗಳಿಗೆ ಸಣ್ಣ ಪ್ರಮಾಣದ ಹಾನಿಯಾಗಿದೆ. ವಿಮಾನಯಾನ ಸಂಸ್ಥೆಗಳ ಮಾಹಿತಿ ಪ್ರಕಾರ, ಈ ಡಿಕ್ಕಿ ವೇಳೆ ಯಾವುದೇ ಪ್ರಯಾಣಿಕರಿಗೆ ಗಾಯವಾಗಿಲ್ಲ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ದೃಢಪಡಿಸಲಾಗಿದೆ. ಘಟನೆಯ ತೀವ್ರತೆ ಕಡಿಮೆಯಾಗಿದ್ದರಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದೆ.
ವರದಿಗಳ ಪ್ರಕಾರ, ಸ್ಪೈಸ್ಜೆಟ್ನ ಬಿ737-700 ವಿಮಾನ ಟ್ಯಾಕ್ಸಿವೇಯಲ್ಲಿ ಚಲಿಸುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದಂತೆ ನಿಂತಿದ್ದ ಆಕಾಸ ಏರ್ ವಿಮಾನಕ್ಕೆ ತಾಗಿದ ಪರಿಣಾಮ ಈ ಘಟನೆ ನಡೆದಿದೆ. ಇದರ ಪರಿಣಾಮ ಆಕಾಸ ಏರ್ ವಿಮಾನದ ಎಡ ರೆಕ್ಕೆ ಹಾಗೂ ಸ್ಟೆಬಿಲೈಸರ್ ಭಾಗಕ್ಕೆ ಹಾನಿಯಾಗಿದೆ. ಅದೇ ವೇಳೆ ಸ್ಪೈಸ್ಜೆಟ್ ವಿಮಾನದ ಬಲ ರೆಕ್ಕೆಗೂ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಆಕಾಸ ಏರ್ ವಿಮಾನ (ಫ್ಲೈಟ್ ಸಂಖ್ಯೆ QP 1406) ದೆಹಲಿಯಿಂದ ಹೈದರಾಬಾದ್ಗೆ ತೆರಳಬೇಕಿದ್ದ ವಿಮಾನವಾಗಿತ್ತು ಎಂದು ಸಂಸ್ಥೆ ತಿಳಿಸಿದೆ. ಘಟನೆ ಕುರಿತು ವಿಮಾನಯಾನ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.