ಉತ್ತರ ಕನ್ನಡ, ಏ. 17 (DaijiworldNews/TA): ಜಿಲ್ಲೆಯ ಗೋಕರ್ಣ ಸಮೀಪದ ಪ್ರಸಿದ್ಧ ಯಾಣ ಗುಹೆಗಳನ್ನು ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್ಐ) ರಾಷ್ಟ್ರೀಯ ಮಹತ್ವದ ಭೂ-ಪಾರಂಪರಿಕ ತಾಣವಾಗಿ ಘೋಷಿಸಿದೆ. ಏಪ್ರಿಲ್ 13ರಂದು ಹೊರಡಿಸಿದ ಅಧಿಕೃತ ಪತ್ರದಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಾಗಿದ್ದು, ಜಿಎಸ್ಐಯ 176ನೇ ಸ್ಥಾಪನಾ ದಿನಾಚರಣೆಯ ಅಂಗವಾಗಿ ಈ ಘೋಷಣೆ ಮಾಡಲಾಗಿದೆ.

ಕೋಟ್ಯಾಂತರ ವರ್ಷಗಳ ಭೂವೈಜ್ಞಾನಿಕ ಇತಿಹಾಸ : ಜಿಎಸ್ಐ ಪತ್ರದ ಪ್ರಕಾರ, ಯಾಣ ಪ್ರದೇಶದ ಶಿಲಾ ರಚನೆಗಳು ಸುಮಾರು 2,700 ಮಿಲಿಯನ್ ವರ್ಷಗಳ ಹಿಂದೆ ರೂಪುಗೊಂಡಿವೆ. ಇವು ಪೂರ್ವ-ಕೇಂಬ್ರಿಯನ್ ಕಾಲದ ಡೊಲೊಮಿಟಿಕ್ ಸುಣ್ಣದ ಕಲ್ಲುಗಳಿಂದ ನಿರ್ಮಿತವಾಗಿವೆ. ಲಕ್ಷಾಂತರ ವರ್ಷಗಳ ಉಷ್ಣವಲಯ ಹವಾಮಾನ ಮತ್ತು ರಾಸಾಯನಿಕ ಕರಗುವಿಕೆಯ ಪರಿಣಾಮವಾಗಿ ವಿಶಿಷ್ಟ ಕಾರ್ಸ್ಟ್ ಭೂರೂಪಗಳು ರೂಪುಗೊಂಡಿವೆ.
ಯಾಣ ಪ್ರದೇಶದಲ್ಲಿ ಸುಮಾರು 61 ವಿಭಿನ್ನ ಕಾರ್ಸ್ಟ್ ರಚನೆಗಳು ಕಂಡುಬಂದಿದ್ದು, ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರಗಳು ಅತ್ಯಂತ ಪ್ರಸಿದ್ಧವಾದ ಜೋಡಿ ಏಕಶಿಲೆಗಳಾಗಿ ಗುರುತಿಸಲ್ಪಟ್ಟಿವೆ. ಇವು ಪೌರಾಣಿಕ ಕಥೆಗಳೊಂದಿಗೆ ಸಂಬಂಧ ಹೊಂದಿದ್ದು, ತೀರ್ಥಯಾತ್ರೆಯ ಸ್ಥಳವಾಗಿಯೂ ಪ್ರಸಿದ್ಧವಾಗಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ವಿಜ್ಞಾನ ಸಂಸ್ಥೆ (IISc) ಬೆಂಗಳೂರಿನ ಪರಿಸರ ವಿಜ್ಞಾನ ಕೇಂದ್ರದ ಸಲಹಾ ವಿಜ್ಞಾನಿ ಎಂ.ಡಿ. ಸುಭಾಷ್ ಚಂದ್ರನ್ ಈ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಯಾಣವು ಭೂವೈಜ್ಞಾನಿಕ ಮಹತ್ವದ ಜೊತೆಗೆ ಸಮೃದ್ಧ ಅರಣ್ಯ ವ್ಯವಸ್ಥೆಯನ್ನೂ ಹೊಂದಿದ್ದು, ಅಘನಾಶಿನಿ ನದಿಗೆ ಪ್ರಮುಖ ನೀರಿನ ಮೂಲವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸುಣ್ಣ ಸಮೃದ್ಧ ಡೊಲೊಮೈಟ್ ರಚನೆಗಳಿಂದಾಗಿ ಈ ಪ್ರದೇಶದ ಜಲ ಸಂಪನ್ಮೂಲಗಳು ದೀರ್ಘಕಾಲಿಕವಾಗಿವೆ ಎಂದು ಅವರು ಹೇಳಿದ್ದು, ಯಾಣ ಹಾಗೂ ಸುತ್ತಮುತ್ತಲಿನ ಜೀವವೈವಿಧ್ಯ ರಕ್ಷಣೆಗೆ ಬಫರ್ ವಲಯ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ. ಭೂ-ಪಾರಂಪರಿಕ ತಾಣಗಳ ಗುರುತಿಸುವಿಕೆಗೆ ಜಿಎಸ್ಐ ನೋಡಲ್ ಸಂಸ್ಥೆಯಾಗಿದ್ದು, ವೈಜ್ಞಾನಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸೌಂದರ್ಯ ಮೌಲ್ಯ ಹೊಂದಿರುವ ಭೂವೈಜ್ಞಾನಿಕ ರಚನೆಗಳನ್ನು ಈ ಪಟ್ಟಿಗೆ ಸೇರಿಸಲಾಗುತ್ತದೆ.