ಬೆಂಗಳೂರು, ಏ. 17 (DaijiworldNews/TA): ರಾಜ್ಯದಲ್ಲಿ ಚಾರಣ (ಟ್ರೆಕ್ಕಿಂಗ್) ವೇಳೆ ಸಂಭವಿಸುತ್ತಿರುವ ಅಪಘಾತಗಳು ಹಾಗೂ ನಾಪತ್ತೆ ಪ್ರಕರಣಗಳ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ಜಾರಿಗೆ ತಂದಿದೆ.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಬೆಂಗಳೂರಿನ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್ನಲ್ಲಿ ಹೊಸ ಎಸ್ಓಪಿಯನ್ನು ಬಿಡುಗಡೆ ಮಾಡಿದ್ದು, ಚಾರಣಿಗರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 44 ಚಾರಣ ತಾಣಗಳು ಕಾರ್ಯನಿರ್ವಹಿಸುತ್ತಿದ್ದು, ಕೊಡಗಿನ ತಡಿಯಾಂಡಮೊಳ್ ಸೇರಿದಂತೆ ಹಲವು ಸ್ಥಳಗಳಲ್ಲಿ ನಾಪತ್ತೆ ಘಟನೆಗಳು ಹಾಗೂ ಚಿಕ್ಕಮಗಳೂರಿನಲ್ಲಿ ನಡೆದ ಬಾಲಕಿ ಸಾವಿನ ಘಟನೆ ಹಿನ್ನೆಲೆಯಲ್ಲಿ ಈ ನಿಯಮಗಳನ್ನು ರೂಪಿಸಲಾಗಿದೆ.
ಹೊಸ ನಿಯಮಗಳ ಪ್ರಕಾರ, ಚಾರಣಿಗರು ಕಡ್ಡಾಯವಾಗಿ ಆನ್ಲೈನ್ ಮೂಲಕ ಮುಂಚಿತವಾಗಿ ಬುಕ್ಕಿಂಗ್ ಮಾಡಬೇಕು. ಪ್ರತಿ 10 ಜನರಿಗೆ ಒಬ್ಬ ಗೈಡ್ ಕಡ್ಡಾಯವಾಗಿದ್ದು, ಗೈಡ್ ಇಲ್ಲದೆ ಚಾರಣಕ್ಕೆ ಅವಕಾಶ ಇರುವುದಿಲ್ಲ. ಟ್ರೆಕ್ಕಿಂಗ್ ವೇಳೆ ಭಾಗವಹಿಸುವವರ ಮೊಬೈಲ್ಗಳಲ್ಲಿ ಟ್ರ್ಯಾಕಿಂಗ್ ಆಪ್ ಅಳವಡಿಸಲಾಗುವುದು. ಜೊತೆಗೆ ಗೈಡ್ಗಳಿಗೆ ಜಿಪಿಎಸ್ ಹೊಂದಿರುವ ವಾಕಿ-ಟಾಕಿ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರತಿ ಚಾರಣ ಸ್ಥಳದ ಕ್ಯಾರಿಂಗ್ ಕೆಪಾಸಿಟಿಯನ್ನು ನಿಗದಿಪಡಿಸಲಾಗಿದ್ದು, ಒಮ್ಮೆ ಗರಿಷ್ಠ 150 ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಒಂದು ತಂಡ ಹಿಂದಿರುಗಿದ ಬಳಿಕವೇ ಮುಂದಿನ ತಂಡವನ್ನು ಕಳುಹಿಸಲಾಗುತ್ತದೆ. ಇದಲ್ಲದೆ ಟಾರ್ಚ್, ಹೆಡ್ಲ್ಯಾಂಪ್ ಸೇರಿದಂತೆ ಅಗತ್ಯ ಸುರಕ್ಷತಾ ಉಪಕರಣಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.