ಯಾದಗಿರಿ, ಏ. 17 (DaijiworldNews/TA): ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ, ಕಾರು ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೆಂಕಿ ಹೊತ್ತಿಕೊಂಡು ಆರು ಮಂದಿ ಸಜೀವ ದಹನಗೊಂಡಿದ್ದಾರೆ.

ಮಾಹಿತಿಯ ಪ್ರಕಾರ, ಕಾರು ಯಾದಗಿರಿಯಿಂದ ರಾಯಚೂರು ಕಡೆಗೆ ತೆರಳುತ್ತಿದ್ದು, ಖಾಸಗಿ ಬಸ್ ಬೆಂಗಳೂರು ಕಡೆಯಿಂದ ಕಲಬುರಗಿ ಕಡೆಗೆ ಬರುತ್ತಿತ್ತು. ಈ ವೇಳೆ ದೇವಾಪುರ ಬಳಿ ಇಬ್ಬರ ಮಧ್ಯೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಯಿಂದ ಕಾರು ಹಾಗೂ ಬಸ್ಸಿಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿದ್ದ ಆರು ಮಂದಿ ಬೆಂಕಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಸುರಪುರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ನಿಖರ ಕಾರಣ ತಿಳಿದುಕೊಳ್ಳಲು ತನಿಖೆ ಮುಂದುವರಿಸಿದ್ದಾರೆ.