ನವದೆಹಲಿ, ಏ. 17 (DaijiworldNews/AA): ರಾಜ್ಯಸಭಾ ಸದಸ್ಯ ಹರಿವಂಶ್ ನಾರಾಯಣ್ ಸಿಂಗ್ ಅವರು ರಾಜ್ಯಸಭಾ ಉಪಾಧ್ಯಕ್ಷರಾಗಿ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹರಿವಂಶ್ ಅವರ ಪುನರಾಯ್ಕೆಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ, "ಮೂರನೇ ಬಾರಿಗೆ ಉಪಸಭಾಪತಿಯಾಗಿ ಆಯ್ಕೆಯಾದ ಹರಿವಂಶ್ ನಾರಾಯಣ್ ಸಿಂಗ್ ಅವರನ್ನು ಸದನದ ಪರವಾಗಿ ನಾನು ಅಭಿನಂದಿಸುತ್ತೇನೆ. ಇದು ಸದನವು ನಿಮ್ಮ ಮೇಲೆ ಇಟ್ಟಿರುವ ಆಳವಾದ ನಂಬಿಕೆಯನ್ನು ತೋರಿಸುತ್ತದೆ" ಎಂದು ತಿಳಿಸಿದರು.
ಏಪ್ರಿಲ್ ೯ ರಂದು ಹರಿವಂಶ್ ಅವರ ಅವಧಿ ಮುಗಿದ ನಂತರ ಈ ಹುದ್ದೆ ಖಾಲಿಯಾಗಿತ್ತು.
ವಿರೋಧ ಪಕ್ಷದ ಯಾವುದೇ ಅಭ್ಯರ್ಥಿ ಇಲ್ಲದ ಕಾರಣ ಚುನಾವಣೆಯು ಅವಿರೋಧವಾಗಿ ನಡೆಯಿತು. ರಾಜ್ಯಸಭೆ ಸದನದ ನಾಯಕ ಜೆ.ಪಿ ನಡ್ಡಾ ಮಂಡಿಸಿದ ಮೊದಲ ನಿರ್ಣಯವನ್ನು ಸದನವು ಧ್ವನಿಮತದ ಮೂಲಕ ಅಂಗೀಕರಿಸಿತು. ನಂತರ ಸಭಾಪತಿಗಳು ಹರಿವಂಶ್ ಅವರನ್ನು ಆಯ್ಕೆಯಾಗಿ ಘೋಷಣೆ ಮಾಡಿದರು.
ಹರಿವಂಶ್ ಈಗಾಗಲೇ 2 ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಇದೀಗ ಅವರು ಮೂರನೇ ಬಾರಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.