ನವದೆಹಲಿ, ಮೇ. 24 (DaijiworldNews/AA): ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆತಂಕಕಾರಿ ಅಂಶವೊಂದು ಬೆಳಕಿಗೆ ಬಂದಿದ್ದು, ಆರೋಪಿಗಳು ಚಾಟ್ಜಿಪಿಟಿ, ಯೂಟ್ಯೂಬ್ನಿಂದ ಮಾಹಿತಿ ಕಲೆಹಾಕಿ ಬಾಂಬ್ಗಳನ್ನು ತಯಾರಿಸಿದ್ದರು ಎಂದು ತಿಳಿದುಬಂದಿದೆ.

ಕೆಂಪು ಕೋಟೆ ಪ್ರದೇಶದಲ್ಲಿ ಕಾರು ಸ್ಫೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ನಡೆಸುತ್ತಿದೆ. ತನಿಖೆಯಲ್ಲಿ ಜಾಗತಿಕ ಭಯೋತ್ಪಾದಕ ಸಂಘಟನೆ ಅಲ್-ಖೈದಾಕ್ಕೆ ಸೇರಿರುವ ಆರೋಪಿಯೊಬ್ಬ ಬಾಂಬ್ ತಯಾರಿಕೆಗೆ ಕೃತಕ ಬುದ್ಧಿಮತ್ತೆ (ಎಐ) ದುರುಪಯೋಗಪಡಿಸಿಕೊಂಡಿದ್ದ. ಅಲ್ಲದೇ ಆರೋಪಿಗಳು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ತಯಾರಿಸಿ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಖಾಜಿಗುಂಡ್ ಕಾಡಿನಲ್ಲಿ ಅವುಗಳನ್ನು ಪರೀಕ್ಷಿಸಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಈ ಸಂಬಂಧ ಎನ್ಐಎ ಅಧಿಕಾರಿಗಳು ಮೇ 14 ರಂದು ವಿಶೇಷ ಎನ್ಐಎ ನ್ಯಾಯಾಲಯದ ಮುಂದೆ ಸಲ್ಲಿಸಿದ 7,500 ಪುಟಗಳ ಬೃಹತ್ ಚಾರ್ಜ್ಶೀಟ್ನಲ್ಲಿ ಆರೋಪಿಗಳ ಸಂಚನ್ನು ಉಲ್ಲೇಖಿಸಲಾಗಿದೆ.