ಚೆನ್ನೈ, ಮೇ. 24 (DaijiworldNews/AK): ಡಿಎಂಕೆ ಯುವ ಘಟಕದ ಮುಖ್ಯಸ್ಥ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಬೆಂಬಲ ನೀಡಿದ ಕಾಂಗ್ರೆಸ್ ನಿಲುವನ್ನು ಕಟುವಾಗಿ ಟೀಕಿಸಿರುವ ಅವರು, “ಕಾಂಗ್ರೆಸ್ ನಮ್ಮ ಬೆನ್ನಿಗೆ ಚೂರಿ ಹಾಕಿದೆ, ಇನ್ಮುಂದೆ ಅವರನ್ನು ಎಂದಿಗೂ ನಂಬುವುದಿಲ್ಲ” ಎಂದು ಹೇಳಿದ್ದಾರೆ.
ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಪಕ್ಷವು 5 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ, ಫಲಿತಾಂಶ ಪ್ರಕಟವಾಗಿ ವಿಜಯ್ ಅವರ ಟಿವಿಕೆ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದ್ದಂತೆ, ಕಾಂಗ್ರೆಸ್ ತಕ್ಷಣವೇ ಡಿಎಂಕೆ ಜೊತೆಗಿನ ಮೈತ್ರಿಯನ್ನು ಮುರಿದು ವಿಜಯ್ ಸರ್ಕಾರಕ್ಕೆ ಬೆಂಬಲ ಘೋಷಿಸಿತು. ಕಾಂಗ್ರೆಸ್ನ ಈ ಹಠಾತ್ ನಿರ್ಧಾರ ಡಿಎಂಕೆ ನಾಯಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಇಂದು ನಡೆದ ಡಿಎಂಕೆ ಯುವ ಘಟಕದ ಸಭೆಯಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್, ಕಾಂಗ್ರೆಸ್ ವಿರುದ್ಧದ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷವು ನಮ್ಮ (ಡಿಎಂಕೆ) ಹೆಗಲ ಮೇಲೆ ಕುಳಿತು ರಾಜಕೀಯ ಲಾಭ ಪಡೆದುಕೊಂಡಿತು. ಆದರೆ ಇಂದು ಅವರು ನಮಗೆ ಬೆನ್ನಿಗೆ ಚೂರಿ ಹಾಕಿದ್ದಾರೆ. ಈ ದ್ರೋಹವನ್ನು ಯಾರೂ ಮರೆಯಬಾರದು. ಭವಿಷ್ಯದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅನ್ನು ನಂಬಬೇಡಿ, ಅವರನ್ನು ನಮ್ಮ ಹತ್ತಿರವೂ ಸೇರಿಸಬೇಡಿ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಕಾರ್ಯತಂತ್ರದಿಂದಾಗಿ ದೇಶದಲ್ಲಿ ಬಿಜೆಪಿ ಸತತವಾಗಿ ಗೆಲ್ಲುತ್ತಿದೆ ಎಂದು ನಾನು ಭಾವಿಸಿದ್ದೆ. ಆದರೆ ಅದು ನಿಜವಲ್ಲ. ದೇಶದಲ್ಲಿ ಬಿಜೆಪಿ ಸತತವಾಗಿ ಗೆಲ್ಲುತ್ತಿರುವುದಕ್ಕೆ ಕಾಂಗ್ರೆಸ್ ಪಕ್ಷದ ನಿಷ್ಕ್ರಿಯತೆ ಮತ್ತು ಇಂತಹ ದ್ರೋಹದ ರಾಜಕಾರಣವೇ ಪ್ರಮುಖ ಕಾರಣ ಎಂಬುದು ಈಗ ಸ್ಪಷ್ಟವಾಗಿದೆ” ಎಂದು ಉದಯನಿಧಿ ಸ್ಟಾಲಿನ್ ಗಂಭೀರ ಆರೋಪ ಮಾಡಿದ್ದಾರೆ.