ಹುಬ್ಬಳ್ಳಿ,ಮೇ. 24 (DaijiworldNews/AK):ವಿಮಾನ ಪ್ರಯಾಣಿಕರಿಗೆ ಆನ್ಲೈನ್ ಟಿಕೆಟ್ ಬುಕ್ಕಿಂಗ್ ವೇದಿಕೆಗಳು ದುಪ್ಪಟ್ಟು ಶುಲ್ಕ ವಿಧಿಸುತ್ತಿದ್ದು, ತಕ್ಷಣವೇ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ CCPA ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಆನ್ಲೈನ್ ಟಿಕೆಟ್ ಬುಕಿಂಗ್ ವೇದಿಕೆಗಳು ಗ್ರಾಹಕರಿಗೆ ವಿಮಾನಯಾನ ಸಂಸ್ಥೆಗಳು ಈ ವಿಧಿಸುವುದಕ್ಕಿಂತ ದುಪ್ಪಟ್ಟು ಶುಲ್ಕ ಸುಲಿಗೆ ಮಾಡುತ್ತಿರುವುದನ್ನು ಗ್ರಾಹಕರೊಬ್ಬರು ಬಯಲಿಗೆಳೆದಿದ್ದು, ಇದನ್ನು ಗಮನಿಸಿದ ಸಚಿವರು ತನಿಖೆ ನಡೆಸಿ ವಂಚನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಹಾಗೂ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಆನ್ಲೈನ್ ಟಿಕೆಟ್ ಬುಕ್ಕಿಂಗ್ ವೇದಿಕೆಗಳು ವಿಮಾನ ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ಅಥವಾ ರದ್ದುಪಡಿಸುವಾಗ ವಿಮಾನಯಾನ ಸಂಸ್ಥೆಗಳು ವಿಧಿಸುತ್ತಿದ್ದ ಶುಲ್ಕಕ್ಕಿಂತ 15 ಪಟ್ಟು ಹೆಚ್ಚಿನ ಶುಲ್ಕ ಹೇರುತ್ತಿರುವುದು ಕಂಡುಬಂದಿದೆ. ಹೀಗಾಗಿ ತಕ್ಷಣವೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಚಿವರು CCPA ಅಧಿಕಾರಿಗಳಿಗೆ ಆದೇಶಿಸಿದ್ದಾರೆ.