ಬೆಂಗಳೂರು, ಜೂ. 21 (DaijiworldNews/AA): ರಾಜ್ಯದಲ್ಲಿ ನಿಲ್ಲಿಸಿರುವ ವಿದ್ಯಾರ್ಥಿ ಚುನಾವಣೆಯನ್ನು ಈ ವರ್ಷದಿಂದಲೇ ಆರಂಭಿಸುತ್ತೇವೆ ಎಂದು ಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಅವರು, "ನನಗೆ 2020ರ ಮಾ.10 ರಂದು ಸೋನಿಯಾ ಗಾಂಧಿ ಪಕ್ಷದ ಅಧಿಕಾರ ನೀಡಿದ್ದರು. ಆಗ ಇಷ್ಟೊಂದು ದೊಡ್ಡದಾಗಿ ಕಾರ್ಯಕ್ರಮ ಮಾಡೋಕೆ ಆಗಿರಲಿಲ್ಲ. ಜೂಮ್ ಕಾಲ್ನಲ್ಲೇ ನಾನು ಅಧಿಕಾರ ಸ್ವೀಕರಿಸಿದೆ. ನಿಮ್ಮ ವಿಶ್ವಾಸ, ಸಹಕಾರದಿಂದ ಸೇವೆ ಮಾಡಿದ್ದೇನೆ. ನಾನು ಮನುಷ್ಯ, ನನ್ನ ಕೈಯಲ್ಲಿ ಅನೇಕ ತಪ್ಪು ಆಗಿರಬಹುದು" ಎಂದು ಹೇಳಿದರು.
"ಕೋವಿಡ್ ಕಾಲದಲ್ಲಿ ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದರು. ಅಂದು ನಾನು, ಸಿದ್ದರಾಮಯ್ಯ ಅವರು ಸೇರಿ ಸಂಕಲ್ಪ ಮಾಡಿದ್ದೆವು. ಖರ್ಗೆ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ವೇಣುಗೋಪಾಲ್ ಅವರು ಪಕ್ಷದ ಕಾರ್ಯದರ್ಶಿಯಾಗಿ ಸಾಕ್ಷಿಯಾಗಿದ್ದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯವರು ನನಗೆ ಆಶೀರ್ವಾದ ಮಾಡಿದರು. ಶುಭ ಘಳಿಗೆಯಲ್ಲಿ ಅಂದು ನಾನು ಅಧಿಕಾರ ಸ್ವೀಕರಿಸಿದ್ದೆ" ಎಂದರು.
"ಕೋವಿಡ್ ಕಾಲದಲ್ಲಿ ಮನೆಯಿಂದ ಹೊರಗೆ ಹೋಗೋಕೆ ಆಗಿರಲಿಲ್ಲ. ಜೂಮ್ ಮೀಟಿಂಗ್ ಮೂಲಕವೇ ಅನೇಕ ಸಮಸ್ಯೆ ಪರಿಹರಿಸಿದ್ದೇವೆ. ಕೋಟಿ ಕೋಟಿ ಹಣ ವೆಚ್ಚ ಮಾಡಿ ಫುಡ್ ಕಿಟ್ ಕೊಟ್ಟಿದ್ದೇವೆ. ಕೆಲವರು ಯಾದಗಿರಿ ವರೆಗೂ ಬಸ್ನಲ್ಲಿ ಹೋಗಬೇಕಿತ್ತು. ಆಗ ಕೆಪಿಸಿಸಿ ವತಿಯಿಂದ 1 ಕೋಟಿ ರೂ. ಚೆಕ್ ಕೊಟ್ಟೆ. ರೈಲು, ಬಸ್ನಲ್ಲಿ ಹೋಗೋಕೆ ವ್ಯವಸ್ಥೆ ಮಾಡಿದೆ. ಅಂದು ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸರ್ಕಾರಿ ನೌಕರಿ ನೀಡಿದ್ದೇವೆ" ಎಂದು ನುಡಿದರು.