ಮಂಡ್ಯ, ಜೂ. 21 (DaijiworldNews/AA): ರಾಜ್ಯದಲ್ಲಿ ಮುಂಗಾರು ಕ್ಷೀಣಿಸಿದ್ದು, ಕಾವೇರಿ ವಿಚಾರದಲ್ಲಿ ತಮಿಳುನಾಡು ಮತ್ತೆ ವಿವಾದ ಮಾಡುತ್ತಿರುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ತಮಿಳುನಾಡಿಗೆ ನಿಗದಿಗಿಂತ ಎರಡು ಪಟ್ಟು ನೀರು ನೀಡಲಾಗಿದೆ. ಆದಾಗ್ಯು ಈಗ ಮಳೆ ಕೊರತೆಯಿರುವ ಸಂದರ್ಭದಲ್ಲಿ ನೀರಿಗಾಗಿ ಒತ್ತಡ ಹೇರುವುದು ಸೂಕ್ತವಲ್ಲ" ಎಂದರು.
"ಬೆಂಗಳೂರಿನ ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆ ಅಗತ್ಯವಾಗಿದೆ. ಈ ಯೋಜನೆ ಅನುಷ್ಠಾನವಾದರೆ ಎರಡೂ ರಾಜ್ಯಗಳಿಗೂ ಲಾಭವಾಗಲಿದೆ" ಎಂದು ತಿಳಿಸಿದರು.