ಮುಜಾಫರ್ಪುರ, ಜೂ. 22 (DaijiworldNews/AA): ಯುಪಿಎಸ್ಸಿ ಪರೀಕ್ಷೆ ಬರೆಯುವ ಆಕಾಂಕ್ಷಿಗಳಿಗೆ ತಮ್ಮ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಬೇಕೆಂಬ ಆಕಾಂಕ್ಷೆಯನ್ನು ಹೋಂದಿರುತ್ತಾರೆ. ಆದರೆ ಕೆಲವರು ಎರಡನೇ ಅಥವಾ ಮೂರನೇ ಅಥವಾ ಹಲವು ಪ್ರಯತ್ನಗಳ ನಂತರ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. ಹೀಗೆ ತಮ್ಮ ಮೂರನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ರಾಘವ್ ಝುಂಜುನ್ವಾಲಾ ಅವರ ಯಶೋಗಾಥೆ ಇದು.

ಬಿಹಾರದ ಮುಜಾಫರ್ಪುರದವರಾದ ರಾಘವ್ ಅವರು ದಿವಂಗತ ನವೀನ್ ಝುಂಜುನ್ವಾಲಾ ಮತ್ತು ಅಂಜು ದೇವಿ ಝುಂಜುನ್ವಾಲಾ ದಂಪತಿಯ ಪುತ್ರ. ತಂದೆಯ ನಿಧನದ ನಂತರ, ತಾಯಿಯೇ ಅವರ ಪ್ರಬಲ ಆಧಾರಸ್ತಂಭವಾಗಿ ನಿಂತು, ಅವರ ಇಂದಿನ ಯಶಸ್ಸಿಗೆ ಕಾರಣರಾಗಿದ್ದಾರೆ.
ರಾಘವ್ ಬಾಲ್ಯದಿಂದಲೂ ಶೈಕ್ಷಣಿಕವಾಗಿ ಮುಂದಿದ್ದರು. 2017ರಲ್ಲಿ ಮುಜಾಫರ್ಪುರದ ಡೆಲ್ಲಿ ಪಬ್ಲಿಕ್ ಸ್ಕೂಲ್ ಇಂಟರ್ನ್ಯಾಷನಲ್ ಗರ್ಹನ್ನಿಂದ 10 ಸಿಜಿಪಿಎ ಯೊಂದಿಗೆ 10ನೇ ತರಗತಿ ಪೂರೈಸಿದರು. 2019ರಲ್ಲಿ ಮುಜಾಫರ್ಪುರದ ಜಿ.ಡಿ ಮದರ್ ಇಂಟರ್ನ್ಯಾಷನಲ್ ಸ್ಕೂಲ್ನಿಂದ ಶೇಕಡಾ 97.4 ಅಂಕಗಳೊಂದಿಗೆ 12ನೇ ತರಗತಿ ಪೂರ್ಣಗೊಳಿಸಿದರು.
ನಂತರ ರಾಘವ್ ಅವರು ದೆಹಲಿಯ ಪ್ರತಿಷ್ಠಿತ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ ನಿಂದ ಅರ್ಥಶಾಸ್ತ್ರದಲ್ಲಿ ಬಿ.ಎ. ಮಾಡಲು ದೆಹಲಿಗೆ ತೆರಳಿದರು. ಪದವಿ ಅವಧಿಯಲ್ಲಿ ಅವರಿಗೆ 'ಚಾರತ್ ರಾಮ್ ಗೋಲ್ಡ್ ಮೆಡಲ್' ಲಭಿಸಿತು. 2022ರಲ್ಲಿ 9.35 ಸಿಜಿಪಿಎ ಯೊಂದಿಗೆ ಅವರು ಪದವಿ ಪಡೆದರು.
2023 ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ರಾಘವ್ ಅವರು ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ಬಳಿಕ 2024ರಲ್ಲಿ ಎರಡನೇ ಬಾರಿಗೆ ಪರೀಕ್ಷೆ ಬರೆದ ಅವರು ಉತ್ತೀರ್ಣರಾಗುವಲ್ಲಿ ವಿಫಲರಾಗುತ್ತಾರೆ.
ರಾಘವ್ ಅವರು ತಮ್ಮ ಹಿನ್ನಡೆಗಳಿಂದ ನಿರಾಶರಾಗದೆ. 2025ರಲ್ಲಿ ಮೂರನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆಯುತ್ತಾರೆ. ಈ ಬಾರಿ ಅವರು ಅಖಿಲ ಭಾರತ 4ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. ಹಿನ್ನಡೆಗಳನ್ನು ಮೆಟ್ಟಿ ನಿಂತು, ದೃಢನಿಶ್ಚಯ, ಪರಿಶ್ರಮದಿಂದ ಯಶಸ್ಸನ್ನು ಸಾಧಿಸಬಹುದೆಂದು ರಾಘವ್ ಝುಂಜುನ್ವಾಲಾ ಸಾಬೀತುಪಡಿಸಿದ್ದಾರೆ.