ದಾವಣಗೆರೆ, ಜೂ. 22 (DaijiworldNews/AA): ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಕಚ್ಚುತ್ತಿದ್ದಂತೆ ಭೀಕರ ಸ್ಫೋಟ ಸಂಭವಿಸಿ ಸಾಕುನಾಯಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಕುದರೆ ಗ್ರಾಮದಲ್ಲಿ ನಡೆದಿದೆ.

ಘಟನೆ ನಡೆದ ದಿನ ರುದ್ರೇಶ್ ಅವರು ಜಮೀನಿನಲ್ಲಿ ದನ ಮೇಯಿಸಲು ಹೋಗುತ್ತಿದ್ದಾಗ ನಾಯಿ ಸಹ ಅವರ ಜೊತೆಗೆ ಹೋಗುತ್ತಿತ್ತು. ಈ ವೇಳೆ ರಸ್ತೆ ಬದಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಕಂಡ ನಾಯಿ ಅದರಲ್ಲಿ ಯಾವುದೋ ಆಹಾರ ಇರಬಹುದೆಂದು ಭಾವಿಸಿ, ಅದನ್ನು ಕಚ್ಚಿದೆ. ಕೂಡಲೇ ಸ್ಫೋಟಗೊಂಡಿದ್ದು, ಪರಿಣಾಮ ನಾಯಿಯ ಮುಖ ಛಿದ್ರವಾಗಿ ಮೃತಪಟ್ಟಿದೆ.
ಸ್ಫೋಟದ ಸದ್ದು ಸುಮಾರು 1 ಕಿಲೋಮೀಟರ್ವರೆಗೆ ಕೇಳಿಸಿದ್ದು, ಇದರಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಕಾಡು ಹಂದಿಗಳ ನಿಯಂತ್ರಣಕ್ಕೆ ಇಡುವ ಸಿಡಿಮದ್ದಿನ ರೀತಿ ಇದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿ, ಬ್ಲಾಸ್ಟ್ ಆಗಿರುವ ವಸ್ತುವನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿ ಬಳಿಕ ಬ್ಲಾಸ್ಟ್ ಆಗಿರುವ ವಸ್ತುವಿನ ಬಗ್ಗೆ ಮಾಹಿತಿ ತಿಳಿದುಬರಲಿದೆ.