ಬೆಂಗಳೂರು, ಜೂ. 22 (DaijiworldNews/AK): ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಅಂಬೇಡ್ಕರ್ ವಿರೋಧಿಗಳಾದ ಕಾಂಗ್ರೆಸ್ ನವರು ಬಿಜೆಪಿ ಮೇಲೆ ಆಪಾದನೆಗಳನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಆರೋಪಿಸಿದ್ದಾರೆ.

ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿ.ಕೆ.ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಿ.ಕೆ.ಹರಿಪ್ರಸಾದ್ ಅವರು, ಬಿಜೆಪಿ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಆದರೆ ನಿಜವಾದ ಸಂವಿಧಾನ ವಿರೋಧಿಗಳು ಕಾಂಗ್ರೆಸ್ ಮುಖಂಡರು ಎಂದು ಹೇಳಿದರು.
ಸಂವಿಧಾನಕ್ಕೆ ಇದುವರೆಗೆ 106 ತಿದ್ದುಪಡಿಗಳನ್ನು ಮಾಡಲಾಗಿದೆ. ಇದರಲ್ಲಿ 76 ತಿದ್ದುಪಡಿಗಳನ್ನು ಕಾಂಗ್ರೆಸ್ ಮಾಡಿದೆ. ಈ ಎಲ್ಲ ತಿದ್ದುಪಡಿಗಳನ್ನು ಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿ ಮತ್ತು ಅಧಿಕಾರ ದುರುಪಯೋಗಕ್ಕಾಗಿ ಮಾಡಿದೆ ಎಂದು ದೂರಿದರು.
ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ, ಪ್ರಜಾಪ್ರಭುತ್ವದ ಕತ್ತು ಹಿಸುಕಿ, ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಿ, ವಿರೋಧಪಕ್ಷದ ನಾಯಕರನ್ನು ಜೈಲಿಗೆ ಅಟ್ಟಿದ್ದು ಕಾಂಗ್ರೆಸ್. ಇವರು ಈಗ ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಯಾವುದೇ ಚರ್ಚೆ ಮಾಡದೆ, ಸಂವಿಧಾನದಲ್ಲಿ ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನೂ ತುರುಕಿದ್ದೂ ಕಾಂಗ್ರೆಸ್. ಈ ಬದಲಾವಣೆಯನ್ನು ಸಂವಿಧಾನಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರೇ ವಿರೋಧಿಸಿದ್ದರು. ಅಂಬೇಡ್ಕರ್ ವಿರೋಧಿಗಳಾದ ನೀವು ಈಗ ಬಿಜೆಪಿ ಮೇಲೆ ಆಪಾದನೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರ
ಜನರಿಂದ ಆಯ್ಕೆಯಾದ ನಾಯಕರಲ್ಲ
ಪ್ರಜಾಪ್ರಭುತ್ವದಲ್ಲಿ ಜನರ ನಡುವಿನಿಂದ ನಾಯಕತ್ವ ಬರಬೇಕು. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು, ಜನರಿಂದ ಆಯ್ಕೆಯಾದ ನಾಯಕ. ಆದರೆ, ರಾಹುಲ್ ಗಾಂಧಿ ಅವರು ಜನರಿಂದ ಆಯ್ಕೆಯದ ನಾಯಕ ಅಲ್ಲ. ಅವರು ವಂಶಪಾರಂಪರ್ಯವಾಗಿ ಬಂದವರು. ನೆಹರು ನಂತರ ಇಂದಿರಾ, ರಾಜೀವ್, ಸೋನಿಯಾ ನಂತರ ರಾಹುಲ್ ಗಾಂಧಿ ಬಂದವರು. ಆದರೆ ನೈಜ ಪ್ರಜಾಪ್ರಭುತ್ವದ ಲಕ್ಷಣವೇ ಜನರ ನಡುವೆ, ಜನರ ಬದುಕು ಆಧರಿಸಿ ಹೋರಾಟ ಮಾಡಿ ರಾಜಕಾರಣ ಮಾಡಬೇಕು ಎಂದರು.
ಹಿಂದೂ ವಿರೋಧಿಯಾಗಿ ಅಧಿಕಾರ ಕಳೆದುಕೊಳ್ಳಬೇಡಿ
ಹಿಂದೂ ವಿರೋಧಿಯಾದ ಕಾಂಗ್ರೆಸ್ ಒಂದೊಂದೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುತ್ತಿದೆ. ಭಾರತವನ್ನು ಕಾಂಗ್ರೆಸ್ ಷರೀಯಾ ರಾಜಧಾನಿ ಮಾಡಲು ಹೊರಟಿದೆ ಎಂದು ಆರೋಪಿಸಿದರು. ಸಂವಿಧಾನದ ಮೊದಲ ಪುಟದಲ್ಲೇ ಶ್ರೀರಾಮನ ಚಿತ್ರ ಇದೆ. ಶ್ರೀಕೃಷ್ಣ, ಬುದ್ಧನ ಚಿತ್ರ ಇದೆ. ಭಾರತವನ್ನು ಷರೀಯ ಮೂಲಕ ನೋಡಲು ಬರಲ್ಲ. ಭಾರತವನ್ನು ಬುದ್ಧ, ಬಸವ, ಇವರ ಮಾದರಿಯಲ್ಲಿ ನೋಡಬೇಕು. ಇವರ ದರ್ಶನಗಳಲ್ಲೇ ಸರ್ವಪಂಥ ಸಮಭಾವ ಇದೆ. ಭಾರತದ ಚಿಂತನೆಯಲ್ಲೇ ಸರ್ವಪಂಥ ಇದೆ ಎಂದು ವಿವರಿಸಿದರು.