ಬೆಂಗಳೂರು, ಜೂ. 22 (DaijiworldNews/AK): ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಶಾಸಕರು ಅಡ್ಡ ಮತದಾನ ಮಾಡಿರೋದು ಮುಗಿದು ಹೋಗಿರುವ ವಿಚಾರ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಎಂಎಲ್ಸಿ ಚುನಾವಣೆಯಲ್ಲಿ ಶಾಸಕರ ಅಡ್ಡ ಮತದಾನ ವಿಚಾರದಲ್ಲಿ ಬಿಜೆಪಿಯಿಂದ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲು ಮುಂದಾಗಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರು ಧರ್ಮಸ್ಥಳದಲ್ಲಿ ಶಾಸಕಾಂಗ ಸಭೆ ಮಾಡೋದ್ರಲ್ಲಿ ತಪ್ಪೇನು ಇಲ್ಲ. ಆದರೆ ಈಗ ಅದು ಮುಗಿದು ಹೋಗಿದೆ. ಈ ಸರ್ಕಾರದಲ್ಲಿ ಯಾರಿಗೆ ಬೇಕಾದರೂ ಬ್ಲ್ಯಾಕ್ ಮೇಲ್ ಮಾಡ್ತಾರೆ. ಆಮಿಷ ಒಡ್ಡುವ ಪರಿಣಿತರು ಇದ್ದಾರೆ ಎಂದು ಕಿಡಿಕಾರಿದ್ದಾರೆ.
ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಹೊಸದಲ್ಲ. ಜಾರ್ಖಂಡ್ನಲ್ಲಿ ಕಾಂಗ್ರೆಸ್ನಲ್ಲೇ ಕ್ರಾಸ್ ವೋಟಿಂಗ್ ಆಗಿದೆ. ಮ್ಯಾನ್ ಪವರ್, ಮಸಲ್ ಪವರ್, ಮನಿ ಪವರ್ ಎಲ್ಲಾ ಇದೆ. ಇದರಿಂದ ಬಿಜೆಪಿ ಸ್ನೇಹಿತರು ಆತಂಕಕ್ಕೆ ಒಳಗಾಗೋದು ಬೇಡ. ನಮ್ಮ 17 ಶಾಸಕರ ಜೊತೆ ಮಾತಾಡಿದ್ದೇನೆ. 18ನೇ ಶಾಸಕರು (ಜಿಟಿ ದೇವೇಗೌಡ) ಹೊರಗೆ ಹೋಗಿ ಎರಡು ವರ್ಷ ಆಗಿದೆ. ಮೊನ್ನೆ ಸಿಎಂ ಭೇಟಿ ಮಾಡಿ ಅಭಿವೃದ್ಧಿ ಬಗ್ಗೆ ಮಾತಾಡಿದೆ ಎಂದಿದ್ದಾರೆ.