ಲಕ್ನೋ,ಜೂ. 22 (DaijiworldNews/AK):ವಾಯುವ್ಯ ಲಕ್ನೋದ ಅಲಿಗಂಜ್ ಪ್ರದೇಶದಲ್ಲಿ ತರಬೇತಿ ಕೇಂದ್ರವಿದ್ದ ಕಟ್ಟಡದಲ್ಲಿ ಸೋಮವಾರ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ದುರಂತ ಸಂಭವಿಸಿದ್ದು, ಕಟ್ಟಡದಲ್ಲಿ ಹಲವರು ಸಿಲುಕಿಕೊಂಡಿದ್ದರು. ಕೆಲವು ವಿದ್ಯಾರ್ಥಿಗಳು ಪ್ರಾಣ ರಕ್ಷಣೆಗಾಗಿ ಮೊದಲ ಮಹಡಿಯಿಂದ ಜಿಗಿದ ದೃಶ್ಯದ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಬೆಂಕಿ ಕೆನ್ನಾಲಿಗೆ ಆವರಿಸಿದ್ದ ಕಟ್ಟಡದಿಂದ ಹುಡುಗನೊಬ್ಬ ಕೆಳಕ್ಕೆ ಜಿಗಿಯುತ್ತಾನೆ. ಗೇಟ್ಗೆ ಬಡಿದು ನೆಲಕ್ಕೆ ಅಪ್ಪಳಿಸುತ್ತಾನೆ. ಅಲ್ಲೇ ನೆರೆದಿದ್ದ ಕೆಲವರು ಆತನಿಗೆ ಸಹಾಯ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಾರೆ. ಹುಡುಗನಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಕೂಡ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಗಳ ಮೇಲ್ವಿಚಾರಣೆ ನಡೆಸಿದ್ದಾರೆ.
ಇದು ಮೂರು ಅಂತಸ್ತಿನ ಕಟ್ಟಡ. ಮೇಲಿನ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಬೇಗನೆ ಇಡೀ ಕಟ್ಟಡಕ್ಕೆ ಹರಡಿತು. ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಜನರು ಕಟ್ಟಡದೊಳಗೆ ಸಿಲುಕಿಕೊಂಡಿದ್ದರು. ಐದರಿಂದ ಏಳು ವಿದ್ಯಾರ್ಥಿಗಳು ಬೆಂಕಿ ಅವಘಡದಿಂದ ಪಾರಾಗಲು ಕಟ್ಟಡದ ಮೇಲಿಂದ ಕೆಳಗೆ ಹಾರಿ ಬಿದ್ದಿದ್ದಾರೆ.