ಬೆಂಗಳೂರು, ಜೂ. 23 (DaijiworldNews/AK): ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಮತ್ತು ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮಹತ್ವದ ಹೆಜ್ಜೆಯನ್ನಿಟ್ಟಿದೆ.

ಪ್ರವಾಸೋದ್ಯಮ ಸಚಿವ ಕೆ. ಜೆ. ಜಾರ್ಜ್ ಅವರ ಸೂಚನೆ ಮೇರೆಗೆ, ಪ್ರವಾಸಿಗರಿಗೆ ಸ್ಥಳೀಯ ಮಾರ್ಗದರ್ಶಕರನ್ನು ಸುಲಭವಾಗಿ ಸಂಪರ್ಕಿಸಲು ನೆರವಾಗುವ ‘ನಮ್ಮ ಗೈಡ್’ ಎಂಬ ಅತ್ಯಾಧುನಿಕ ವೆಬ್ಸೈಟ್ ಹಾಗೂ ಆ್ಯಪ್ ಅಭಿವೃದ್ಧಿಪಡಿಸಲು ಇಲಾಖೆ ಸಜ್ಜಾಗಿದೆ.
ಪ್ರಸ್ತುತ ವಿದೇಶಗಳಲ್ಲಿ ಪ್ರವಾಸಿಗರು ತಮಗೆ ಬೇಕಾದ ಗೈಡ್ಗಳನ್ನು ಆನ್ಲೈನ್ ಮೂಲಕವೇ ಮುಂಚಿತವಾಗಿ ಕಾಯ್ದಿರಿಸುವ (Booking) ಅತ್ಯಾಧುನಿಕ ವ್ಯವಸ್ಥೆಗಳಿವೆ. ಇದೇ ಮಾದರಿಯನ್ನು ಇದೀಗ ಕರ್ನಾಟಕದಲ್ಲೂ ಅಳವಡಿಸಿಕೊಳ್ಳಲಾಗುತ್ತಿದೆ. ಯಾವುದೇ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ದೇಶ-ವಿದೇಶಗಳ ಪ್ರವಾಸಿಗರಿಗೆ ಆಯಾ ಪ್ರದೇಶದ ಇತಿಹಾಸ, ಸಂಸ್ಕೃತಿ ಮತ್ತು ಮಹತ್ವದ ಬಗ್ಗೆ ನಿಖರ ಮಾಹಿತಿ ನೀಡಲು ಈ ವೇದಿಕೆ ಸಹಕಾರಿಯಾಗಲಿದೆ.
ಈ ನೂತನ ಡಿಜಿಟಲ್ ವ್ಯವಸ್ಥೆಯಿಂದಾಗಿ ಪ್ರವಾಸಿಗರು ಸ್ಥಳೀಯ ಗೈಡ್ಗಳನ್ನು ನೇರವಾಗಿ ಸಂಪರ್ಕಿಸಿ, ಪ್ರವಾಸಿ ತಾಣಗಳನ್ನು ಹೆಚ್ಚು ಅರ್ಥಪೂರ್ಣವಾಗಿ ವೀಕ್ಷಿಸಬಹುದಾಗಿದೆ. ಜೊತೆಗೆ, ಪ್ರವಾಸೋದ್ಯಮ ಇಲಾಖೆಯಲ್ಲಿ ಈಗಾಗಲೇ ನೋಂದಣಿಯಾಗಿರುವ ನೂರಾರು ಸ್ಥಳೀಯ ಗೈಡ್ಗಳಿಗೆ ಇದರಿಂದ ಹೆಚ್ಚಿನ ಉದ್ಯೋಗಾವಕಾಶಗಳು ಹಾಗೂ ಆರ್ಥಿಕ ಭದ್ರತೆ ಸಿಗಲಿದೆ.
ಕೇವಲ ಮಾಹಿತಿ ನೀಡುವುದು ಮಾತ್ರವಲ್ಲದೆ, ಪ್ರವಾಸಿ ತಾಣಗಳ ಸ್ವಚ್ಛತೆ ಕಾಪಾಡುವಲ್ಲಿ ಹಾಗೂ ಅವುಗಳ ಸಮರ್ಪಕ ನಿರ್ವಹಣೆಯಲ್ಲಿ ಸ್ಥಳೀಯ ಗೈಡ್ಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಈ ಆ್ಯಪ್ ನೆರವಾಗಲಿದೆ.