ಬೆಂಗಳೂರು, ಜೂ. 23 (DaijiworldNews/AA): ಧರ್ಮಸ್ಥಳಕ್ಕೆ ರಾಜಕೀಯವನ್ನು ಎಳೆದು ತಂದು ಪಕ್ಷಕ್ಕೆ ಮತ್ತಷ್ಟು ಮುಜುಗರ ತರಬೇಡಿ ಎಂದು ಬಿಜೆಪಿ ಹೈಕಮಾಂಡ್ ಎಚ್ಚರಿಕೆ ನೀಡಿದೆ.

ನಿಮ್ಮ ತಪ್ಪು ಮತ್ತು ವೈಫಲ್ಯದಿಂದಲೇ ರಾಜ್ಯದಲ್ಲಿ ಅಡ್ಡಮತದಾನ ಚಲಾವಣೆ ಆಯಿತು. ನಿಮಗೆ ಶಾಸಕರ ಮೇಲೆ ಯಾವುದೇ ಹಿಡಿತ ಇರಲಿಲ್ಲ, ಅವರ ಮೇಲೆ ಸರಿಯಾದ ನಿಗಾ ಇಡುವಲ್ಲಿಯೂ ನೀವು ಸಂಪೂರ್ಣವಾಗಿ ವಿಫಲರಾಗಿದ್ದೀರಿ. ಕಾಂಗ್ರೆಸ್ ನಾಯಕರು ಆಮಿಷ ಒಡ್ಡಿ ನಿಮ್ಮದೇ ಶಾಸಕರನ್ನು ಸೆಳೆಯಲು ಅವಕಾಶ ಮಾಡಿಕೊಟ್ಟಿದ್ದೇ ನಿಮ್ಮ ಬೇಜವಾಬ್ದಾರಿತನ ಎಂದು ಹೈಕಮಾಂಡ್ ರಾಜ್ಯ ನಾಯಕರ ವಿರುದ್ಧ ಕಿಡಿಕಾರಿದೆ.
ಈಗಾಗಲೇ ಆಗಿರುವ ಎಡವಟ್ಟನ್ನು ಮೊದಲು ಸರಿಪಡಿಸುವುದು ಹೇಗೆ ಎಂಬುದರ ಕಡೆ ಗಮನಹರಿಸಿ. ಅದನ್ನು ಬಿಟ್ಟು ಧರ್ಮಸ್ಥಳದಲ್ಲಿ ಆಣೆ-ಪ್ರಮಾಣದ ನಾಟಕವಾಡಿ ಮತ್ತೊಂದು ಹೊಸ ವಿವಾದ ಸೃಷ್ಟಿಸಬೇಡಿ ಎಂದು ಹೈಕಮಾಂಡ್ ಸೂಚನೆ ನೀಡಿದೆ.
ಇನ್ನು ಹೈಕಮಾಂಡ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ರಾಜ್ಯ ಬಿಜೆಪಿ ನಾಯಕರು, ಧರ್ಮಸ್ಥಳದಲ್ಲಿ ನಡೆಸಲುದ್ದೇಶಿಸಿದ್ದ ಆಣೆ-ಪ್ರಮಾಣದ ರಾಜಕೀಯ ಮತ್ತು ಶಾಸಕಾಂಗ ಪಕ್ಷದ ಸಭೆಯಿಂದ ಅಧಿಕೃತವಾಗಿ ಹಿಂದೆ ಸರಿದಿದ್ದಾರೆ.