ಬೆಂಗಳೂರು, ಜೂ. 23 (DaijiworldNews/AK): ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ ಜಾರಿ ಮಾಡುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಪತ್ರ ಬರೆದಿರುವುದಾಗಿ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೃಷ್ಣ ಭೈರೇಗೌಡ ಅವರನ್ನು ಭೇಟಿ ಮಾಡಿ ನಗರದ ಅಭಿವೃದ್ಧಿ ಮತ್ತು ನಾಗರಿಕರಿಗೆ ಅನುಕೂಲವಾಗುವ 15 ಅಂಶಗಳ ಬಗ್ಗೆ ವಿಸ್ತಾರವಾಗಿ ಚರ್ಚೆ ನಡೆಸಿರುವುದಾಗಿ ತಿಳಿಸಿದರು.
ನಗರದ ಜನರ ಜೀವನ ಮಟ್ಟ ಸುಧಾರಿಸುವ ಕ್ರಮಗಳಿಗೆ ಶೇ ನೂರರಷ್ಟು ಬೆಂಬಲವನ್ನು ಕೇಂದ್ರ ಸರ್ಕಾರದ ಮಟ್ಟದಲ್ಲಿ ನೀಡಲಾಗುವುದು. ಸಚಿವರಿಗೆ ಅಭಿವೃದ್ಧಿ ಸಂಬಂಧ ವಿವರವನ್ನು ಅಂಕಿ ಅಂಶಗಳ ಸಮೇತ ನೀಡಿದ್ದೇನೆ. ರಾಜ್ಯ ಸರ್ಕಾರದ ಮೂವತ್ತಕ್ಕೂ ಹೆಚ್ಚು ಯೋಜನೆಗಳು ಬಾಕಿ ಇವೆ. ಹೊಸ ಯೋಜನೆ ಜಾರಿ ಮಾಡುವ ಮೊದಲು ಹಳೆಯ ಯೋಜನೆಗಳನ್ನು ಶೀಘ್ರ ಮುಗಿಸಬೇಕು ಎಂದು ತಿಳಿಸಿರುವುದಾಗಿ ಹೇಳಿದರು.
ಬಿಎಂಆರ್ಸಿಲ್, ಬಿಡಿಎ, ಬಿಎಂಎಲ್ಟಿಎ. ಕೆಆರ್ಐಡಿಎಲ್ ಸೇರಿ 12 ಕ್ಕೂ ಹೆಚ್ಚು ಮೂಲಸೌಕರ್ಯ ಏಜೆನ್ಸಿಗಳು ಬೆಂಗಳೂರಿನಲ್ಲಿವೆ. ಇವುಗಳ ನಡುವೆ ಅಂತರ ಸಮನ್ವಯ ಏಜೆನ್ಸಿ ಇಲ್ಲ. ಆದ್ದರಿಂದ ಬಿಎಂಎಲ್ಟಿಎಗೆ ಅಧ್ಯಕ್ಷರ ನೇಮಕ ಮಾಡಿ ನೋಡಲ್ ಏಜೆನ್ಸಿ ಮಾಡಬೇಕು ಎಂದರು. ಮೆಟ್ರೊ ವಿಸ್ತರಣೆ, ರಸ್ತೆ ಗುಂಡಿಗಳನ್ನು ಮುಚ್ಚುವುದು, ಪಾದಚಾರಿ ಮಾರ್ಗದ ಬಗ್ಗೆ ಚರ್ಚಿಸಿರುವುದಾಗಿ ಹೇಳಿದರು.
ನಾಲ್ಕೂವರೆ ವರ್ಷಗಳಿಂದ ಹೊಸ ಮೆಟ್ರೊ ಕಾಮಗಾರಿ ಆರಂಭವಾಗಿಲ್ಲ. ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವ ಮೆಟ್ರೊ ಮೂರನೇ ಹಂತದ ಆರೆಂಜ್ ಮಾರ್ಗಕ್ಕೆ ಎರಡು ವರ್ಷ ಆದರೂ ಟೆಂಡರ್ ಆಗಿಲ್ಲ. ಇದರ ವೆಚ್ಚ ಹೆಚ್ಚಳವಾಗುತ್ತಿದೆ. ಮೆಟ್ರೊ ಯೋಜನೆಯಲ್ಲಿ ವೆಚ್ಚ ಕಡಿಮೆ ಮಾಡಲು ಭೂಗತ ಮೆಟ್ರೊ ನಿಲ್ದಾಣಗಳ ಉದ್ದ ಕಡಿಮೆ ಮಾಡಿದ್ದಾರೆ. ಇದರಿಂದ ಎಂಟು ಬೋಗಿ ಬದಲು ಆರು ಬೋಗಿಯ ಮೆಟ್ರೊ ಮಾತ್ರ ನಿಲುಗಡೆ ಮಾಡಬಹುದು. ವೆಚ್ಚ ಕಡಿಮೆ ಮಾಡಲು ನಿಲ್ದಾಣದ ಪ್ಲಾಟ್ಫಾರಂ ಉದ್ದ ಕಡಿಮೆ ಮಾಡಿದರೆ ಉಪಯೋಗ ಆಗದು ಎಂದರು
ಮೆಟ್ರೊ ಬೇಗ ಆರಂಭವಾಗಲಿ
ಬೆಂಗಳೂರಿನಲ್ಲಿ ಬೇರೆ ಬೇರೆ ಕಡೆಗಳಿಂದ ಬಂದು ಕೆಲಸ ಮಾಡುವವರು ಮುಂಜಾನೆ ಮೆಟ್ರೊಗೆ ಕಾಯಬೇಕಾಗಿದೆ. ಆದ್ದರಿಂದ ಪ್ರತಿ ದಿನ ಮೆಟ್ರೊವನ್ನು ಬೆಳಗ್ಗೆ ಐದು ಗಂಟೆಗೆ ಆರಂಭ ಮಾಡಬೇಕು. ಬೇರೆ ಮಹಾನಗರದಲ್ಲಿ ಮೆಟ್ರೊ ಮುಂಜಾನೆ ಬೇಗ ಆರಂಭವಾಗುತ್ತದೆ. ಅದೇ ರೀತಿ ಬೆಂಗಳೂರಿನಲ್ಲೂ ಆರಂಭ ಮಾಡಬೇಕು ಎಂದು ಮನವಿ ಮಾಡಿದ್ದೇನೆ ಎಂದು ವಿವರಿಸಿದರು.