ಬೆಂಗಳೂರು, ಜೂ. 23 (DaijiworldNews/AA): ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಅಡ್ಡ ಮತದಾನ ಮಾಡಿದವರ ಪತ್ತೆಗೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಂತಹ ಪಕ್ಷದಲ್ಲಿ ಅಡ್ಡ ಮತದಾನ ಮಾಡಿರೋದು ದ್ರೋಹ ಇದನ್ನ ಖಂಡಿಸುತ್ತೇನೆ. ಶಿಸ್ತಿನ ಪಕ್ಷದಲ್ಲಿ ಈ ರೀತಿ ಆಗಬಾರದು. ಅಡ್ಡ ಮತದಾನದಿಂದ ಅಧ್ಯಕ್ಷರು ವಿಚಲಿತರಾಗಿದ್ದಾರೆ. ಉದ್ವೇಗಕ್ಕೆ ಒಳಗಾಗಿ ಮಾತಾಡಿದ್ದಾರೆ. ನಾನು ಸಲಹೆ ಕೊಡ್ತೀನಿ ಧರ್ಮಸ್ಥಳಕ್ಕೆ ಹೋಗೋ ಅವಶ್ಯಕತೆ ಇಲ್ಲ. ಬೇರೆ ರೀತಿ ಹುಡುಕಿ ಅಂತಹವರ ಮೇಲೆ ಕ್ರಮ ಆಗಬೇಕು" ಎಂದು ತಿಳಿಸಿದರು.
"ಅಡ್ಡ ಮತದಾನ ಮಾಡಿದವರಿಗೆ ಕ್ಷಮೆ ಮಾಡಬಾರದು. ಯಾರು ಮಾಡಿದ್ದಾರೆ ಅಂತ ಕಂಡು ಹಿಡಿಯೋಕೆ ಕಮಿಟಿ ಮಾಡಿದ್ದಾರೆ. ವರದಿ ಏನು ಬರುತ್ತೋ ನೋಡೋಣ. ಯಾರು ಅಡ್ಡ ಮತದಾನ ಮಾಡಿದ್ದಾರೆಂದು ಕಂಡು ಹಿಡಿಯಬಹುದು. ಆದರೆ, ಟೈಂ ತೆಗೆದುಕೊಳ್ಳುತ್ತದೆ. ಅಡ್ಡ ಮತದಾನವನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಅಧ್ಯಕ್ಷರು, ವಿಪಕ್ಷ ನಾಯಕರನ್ನ ದೆಹಲಿಗೆ ಕರೆಸಿಕೊಂಡಿದ್ದಾರೆ. ಅಡ್ಡ ಮತದಾನ ಮಾಡಿದವರ ಮೇಲೆ ಕ್ರಮ ಆಗುತ್ತೆ" ಎಂದರು.