ನವದೆಹಲಿ, ಜೂ. 24 (DaijiworldNews/AK): ಅಮೆರಿಕ ಮತ್ತು ಇರಾನ್ ನಡುವೆ ಇತ್ತೀಚೆಗಷ್ಟೇ ಶಾಂತಿ ಒಪ್ಪಂದ ಏರ್ಪಟ್ಟಿದ್ದರೂ, ಇರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಬುಧವಾರ ತನ್ನ ನಾಗರಿಕರಿಗೆ ಹೊಸದೊಂದು ಮಹತ್ವದ ಪ್ರಯಾಣ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಮುಂದಿನ ಆದೇಶ ಬರುವವರೆಗೂ ಭಾರತೀಯ ಪ್ರಜೆಗಳು ಇರಾನ್ಗೆ ಯಾವುದೇ ರೀತಿಯ ಅನಿವಾರ್ಯವಲ್ಲದ ಪ್ರಯಾಣವನ್ನು ಕೈಗೊಳ್ಳಬಾರದು ಎಂದು ಭಾರತ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಇರಾನ್ ಮತ್ತು ಅಮೆರಿಕ ನಡುವಿನ ಇತ್ತೀಚಿನ ಮಾತುಕತೆಗಳ ನಂತರ ಅಲ್ಲಿನ ಭದ್ರತಾ ಪರಿಸ್ಥಿತಿ ಸುಧಾರಿಸುತ್ತಿರುವುದನ್ನು ಒಪ್ಪಿಕೊಂಡಿರುವ ಭಾರತೀಯ ರಾಯಭಾರ ಕಚೇರಿ, ಅದರೆ ಸಂಪೂರ್ಣ ಭದ್ರತೆಯ ದೃಷ್ಟಿಯಿಂದ ಭಾರತೀಯರು ಸದ್ಯಕ್ಕೆ ತಮ್ಮ ಇರಾನ್ ಪ್ರವಾಸದ ಯೋಜನೆಗಳನ್ನು ಮುಂದೂಡುವುದು ಸೂಕ್ತ ಎಂದು ತಿಳಿಸಿದೆ.
ಜಾಗರೂಕರಾಗಿರಲು ಸೂಚನೆ: ಪ್ರಸ್ತುತ ಇರಾನ್ನಲ್ಲಿ ವಾಸಿಸುತ್ತಿರುವ ಭಾರತೀಯರು ಅತ್ಯಂತ ಎಚ್ಚರಿಕೆಯಿಂದ ಇರಬೇಕು, ಸದಾ ಜಾಗೃತರಾಗಿರಬೇಕು ಮತ್ತು ಸ್ಥಳೀಯ ಇರಾನ್ ಅಧಿಕಾರಿಗಳು ನೀಡುವ ಸುರಕ್ಷತಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಭಾರತೀಯ ರಾಯಭಾರ ಕಚೇರಿ ಹೇಳಿದೆ.
ಪ್ರಸ್ತುತ ಇರಾನ್ನಲ್ಲಿ ನೆಲೆಸಿರುವ ಎಲ್ಲಾ ಭಾರತೀಯ ಪ್ರಜೆಗಳು ಮತ್ತು ಯಾವುದೇ ತುರ್ತು ಕೆಲಸದ ನಿಮಿತ್ತ ಇರಾನ್ಗೆ ಹೊಸದಾಗಿ ಆಗಮಿಸುವವರು, ತಕ್ಷಣವೇ ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕೃತ ವೆಬ್ಸೈಟ್ ಅಥವಾ ಕಚೇರಿಗೆ ಭೇಟಿ ನೀಡಿ ತಮ್ಮ ಸಂಪೂರ್ಣ ವಿವರಗಳನ್ನು ಆದಷ್ಟು ಬೇಗ ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ತುರ್ತು ಸಂದರ್ಭಗಳಲ್ಲಿ ನಾಗರಿಕರನ್ನು ಸಂಪರ್ಕಿಸಲು ಮತ್ತು ರಕ್ಷಣಾ ಕಾರ್ಯ ಕೈಗೊಳ್ಳಲು ಇದು ಸಹಕಾರಿಯಾಗಲಿದ್ದು, ಮುಂದಿನ ಹೊಸ ಅಪ್ಡೇಟ್ಗಳಿಗಾಗಿ ರಾಯಭಾರ ಕಚೇರಿಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಗಮನಿಸುತ್ತಿರುವಂತೆ ಹೇಳಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿದ್ದ ಭೀಕರ ಮಿಲಿಟರಿ ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಮತ್ತು ಅಮೆರಿಕ ಇತ್ತೀಚೆಗಷ್ಟೇ 14 ಅಂಶಗಳ ಜಂಟಿ ಶಾಂತಿ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿವೆ. ಈ ಒಪ್ಪಂದವನ್ನು ಜಾರಿಗೆ ತರಲು ಉಭಯ ದೇಶಗಳ ಪ್ರತಿನಿಧಿಗಳು ಸ್ವಿಟ್ಜರ್ಲ್ಯಾಂಡ್ನಲ್ಲಿ ಇತ್ತೀಚೆಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.