ನವದೆಹಲಿ, ಜೂ. 24 (DaijiworldNews/AA): ಸಿಂಧೂ ಜಲ ಒಪ್ಪಂದ ಅಮಾನತು ವಿಚಾರವಾಗಿ ಯುದ್ಧದ ಬೆದರಿಕೆ ಹಾಕಿದ್ದ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರ ಹೇಳಿಕೆಗೆ ಭಾರತ ತಿರುಗೇಟು ನೀಡಿದೆ.

ಕೆಲ ದಿನಗಳ ಹಿಂದೆ ಖ್ವಾಜಾ ಆಸಿಫ್, 'ಪಾಕಿಸ್ತಾನದ ನೀರಿನ ಭದ್ರತೆಗೆ ಧಕ್ಕೆಯಾದರೆ ಯುದ್ಧವನ್ನೂ ಪರಿಗಣಿಸಬೇಕಾಗಬಹುದು' ಎಂದು ಎಚ್ಚರಿಸಿದ್ದರು. ಆಸಿಫ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಭಾರತ 'ಇಂತಹ ಹೇಳಿಕೆಗಳು ಪಾಕಿಸ್ತಾನದ ವೈಫಲ್ಯಗಳನ್ನು ಮುಚ್ಚಿಹಾಕುವ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಿಂದ ಜಗತ್ತಿನ ಗಮನ ಬೇರೆಡೆ ಸೆಳೆಯುವ ಪ್ರಯತ್ನ' ಎಂದು ಟೀಕಿಸಿದೆ.
"ಭಾರತದ ನಿಲುವು ಸ್ಪಷ್ಟವಾಗಿದೆ. ಪಾಕಿಸ್ತಾನದ ಇಂತಹ ಹೇಳಿಕೆಗಳು ತಮ್ಮದೇ ವೈಫಲ್ಯಗಳನ್ನು ಮುಚ್ಚಿಹಾಕಲು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳಿಂದ ಗಮನ ಬೇರೆಡೆ ಸೆಳೆಯಲು ನಡೆಸುತ್ತಿರುವ ಹತಾಶ ಪ್ರಯತ್ನಗಳಾಗಿವೆ. ಈ ಸುಳ್ಳು ಆರೋಪಗಳನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಭಾರತವು ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿ ಇಡುವ ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
"ಪಿಒಕೆ ಉಂಟಾಗಿರುವ ಸಮಸ್ಯೆಗಳು ಪಾಕಿಸ್ತಾನದ ದಶಕಗಳ ಆರ್ಥಿಕ ಶೋಷಣೆ, ಮೂಲಭೂತ ಹಕ್ಕುಗಳ ನಿರಾಕರಣೆ ಮತ್ತು ಆಡಳಿತಾತ್ಮಕ ದಬ್ಬಾಳಿಕೆಯ ನೇರ ಪರಿಣಾಮವಾಗಿದೆ" ಎಂದು ಹೇಳಿದ್ದಾರೆ.