ಮುಂಬೈ, ಜೂ. 24 (DaijiworldNews/TA): ಮಹಾರಾಷ್ಟ್ರ ರಾಜಧಾನಿ ಮುಂಬೈಯಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದ ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದ್ದು, ಹಲವೆಡೆ ಮರಗಳು ಉರುಳಿಬಿದ್ದಿರುವ ಘಟನೆಗಳು ವರದಿಯಾಗಿವೆ. ಕೆಲವು ಪ್ರದೇಶಗಳಲ್ಲಿ ಗೋಡೆ ಕುಸಿತದ ಪ್ರಕರಣಗಳೂ ಬೆಳಕಿಗೆ ಬಂದಿವೆ.

ಭಾರತದ ಹವಾಮಾನ ಇಲಾಖೆ ನಗರಕ್ಕೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಮಂಗಳವಾರ ರಾತ್ರಿ 8.30ರಿಂದ ಬುಧವಾರ ಬೆಳಗ್ಗೆ 5.30ರ ಅವಧಿಯಲ್ಲಿ ನಗರದ ವಿವಿಧ ಭಾಗಗಳಲ್ಲಿ ದಾಖಲೆಯ ಮಳೆಯಾಗಿದೆ. ರಾಮ ಮಂದಿರ ಪ್ರದೇಶದಲ್ಲಿ 224 ಮಿ.ಮೀ., ಕೊಲಾಬಾದಲ್ಲಿ 218.5 ಮಿ.ಮೀ. ಹಾಗೂ ಸಾಂತಾಕ್ರೂಜ್ನಲ್ಲಿ 210.6 ಮಿ.ಮೀ. ಮಳೆಯಾಗಿದೆ. ಪರಿಣಾಮವಾಗಿ ಹಲವು ತಗ್ಗು ಪ್ರದೇಶಗಳು ನೀರಿನಿಂದ ಆವೃತಗೊಂಡಿವೆ.
ಭಾರೀ ಮಳೆಯ ಪರಿಣಾಮ ರೈಲು ಸಂಚಾರಕ್ಕೂ ಅಡ್ಡಿಯಾಗಿದೆ. ತುರ್ಭೆ ಮತ್ತು ಕೋಪರ್ಖೈರನೆ ರೈಲು ನಿಲ್ದಾಣಗಳ ನಡುವಿನ ಹಳಿ ಭಾಗದಲ್ಲಿ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಕೆಲಕಾಲ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಬಳಿಕ ಅಧಿಕಾರಿಗಳು ತುರ್ತು ದುರಸ್ತಿ ಕಾರ್ಯ ಕೈಗೊಂಡು ರೈಲು ಸಂಚಾರವನ್ನು ಪುನರಾರಂಭಿಸಿದರು.
ಇದೀಗ ನಗರದ ಬಹುತೇಕ ಪ್ರದೇಶಗಳಲ್ಲಿ ನೀರಿನ ಮಟ್ಟ ಇಳಿಯತೊಡಗಿದ್ದು, ಸಂಚಾರ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಆದಾಗ್ಯೂ, ಹವಾಮಾನ ಇಲಾಖೆ ಇನ್ನೂ ಭಾರೀ ಮಳೆಯ ಮುನ್ಸೂಚನೆ ನೀಡಿರುವುದರಿಂದ ನಾಗರಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ನಗರದ ವಿವಿಧ ಭಾಗಗಳಲ್ಲಿ ನಾಗರಿಕ ಆಡಳಿತ, ಅಗ್ನಿಶಾಮಕ ದಳ ಹಾಗೂ ವಿಪತ್ತು ನಿರ್ವಹಣಾ ತಂಡಗಳು ಕಟ್ಟೆಚ್ಚರ ವಹಿಸಿದ್ದು, ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇಟ್ಟಿವೆ. ಮುಂದಿನ ಎರಡು ದಿನಗಳು ಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಚಟುವಟಿಕೆ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.