ನವದೆಹಲಿ, ಜೂ. 24 (DaijiworldNews/TA): ರಾಜಧಾನಿ ದೆಹಲಿಯ ಉದ್ಯೋಗ ಭವನದ ಸಮೀಪದ ಕಾರ್ಮಿಕರ ಶಿಬಿರದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 200ಕ್ಕೂ ಹೆಚ್ಚು ಟಿನ್ಶೆಡ್ ಮನೆಗಳು ಸುಟ್ಟು ಭಸ್ಮವಾಗಿವೆ. ಬೆಳಗಿನ ಜಾವ ಸಂಭವಿಸಿದ ಈ ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಮಾಹಿತಿಯ ಪ್ರಕಾರ, ಬೆಳಿಗ್ಗೆ ಸುಮಾರು 3 ಗಂಟೆ ವೇಳೆಗೆ ವಿದ್ಯುತ್ ಪ್ಯಾನೆಲ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಅದು ಕಾರ್ಮಿಕರ ತಾತ್ಕಾಲಿಕ ವಸತಿ ಶೆಡ್ಗಳಿಗೆ ವ್ಯಾಪಿಸಿದೆ. ಶೆಡ್ಗಳು ಟಿನ್ ಹಾಗೂ ಸುಲಭವಾಗಿ ಹೊತ್ತಿ ಉರಿಯುವ ವಸ್ತುಗಳಿಂದ ನಿರ್ಮಾಣವಾಗಿದ್ದ ಕಾರಣ ಬೆಂಕಿ ವೇಗವಾಗಿ ಹರಡಿದೆ. ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಅಗ್ನಿಶಾಮಕ ದಳದ 20 ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ. ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉದ್ಯೋಗ ಭವನದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸೆಂಟ್ರಲ್ ವಿಸ್ಟಾ ಪುನರ್ಅಭಿವೃದ್ಧಿ ಯೋಜನೆಯಡಿ ಧ್ವಂಸ ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲೇ ಈ ಅವಘಡ ಸಂಭವಿಸಿದೆ. ಕಾರ್ಮಿಕರ ಶಿಬಿರದಲ್ಲಿ ಅಡುಗೆಗಾಗಿ ಬಳಸುತ್ತಿದ್ದ ಸಣ್ಣ ಸಿಲಿಂಡರ್ಗಳಿದ್ದ ಕಾರಣ ಬೆಂಕಿಯ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ ಎನ್ನಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ. ಆದರೆ ನೂರಾರು ಕಾರ್ಮಿಕ ಕುಟುಂಬಗಳು ತಮ್ಮ ವಾಸಸ್ಥಳ ಮತ್ತು ಅಗತ್ಯ ವಸ್ತುಗಳನ್ನು ಕಳೆದುಕೊಂಡಿವೆ. ಬೆಂಕಿಯಿಂದ ಉಂಟಾದ ನಷ್ಟದ ನಿಖರ ಅಂದಾಜು ಇನ್ನೂ ಲಭ್ಯವಾಗಿಲ್ಲ. ಪ್ರಾಥಮಿಕ ತನಿಖೆಯ ಪ್ರಕಾರ ವಿದ್ಯುತ್ ಪ್ಯಾನೆಲ್ನಲ್ಲಿ ಕಾಣಿಸಿಕೊಂಡ ಬೆಂಕಿಯೇ ಅವಘಡಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣದ ಕುರಿತು ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.