ನವದೆಹಲಿ, ಜೂ. 24 (DaijiworldNews/AK): ಭಾರತೀಯ ರೈಲ್ವೆಯು ದೇಶಾದ್ಯಂತ ಸ್ವಚ್ಛತೆ ಮತ್ತು ಪ್ರಯಾಣಿಕರ ಸೌಕರ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.

ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಮಹಿಳೆಯರ ಪ್ರಯಾಣವನ್ನು ಸುಲಭ ಹಾಗೂ ಇನ್ನಷ್ಟು ಅನುಕೂಲ ಮಾಡುವ ಉದ್ದೇಶದಿಂದ ಉತ್ತರ ಭಾರತದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ಗಳನ್ನು ಇರಿಸಲಾಗಿದೆ.
ದೇಶದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಮಹಿಳೆಯರಿಗಾಗಿ ಉಚಿತ ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಯಂತ್ರಗಳನ್ನು ರೈಲ್ವೆ ಇಲಾಖೆ ಪರಿಚಯಿಸಿದೆ. ಮಹಿಳಾ ಪ್ರಯಾಣಿಕರಿಗೆ ದಿನದ 24 ಗಂಟೆಯೂ ಈ ಉತ್ಪನ್ನಗಳು ಸುಲಭವಾಗಿ ಸಿಗುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಉಪಕ್ರಮದಡಿಯಲ್ಲಿ ಉತ್ತರ ರೈಲ್ವೆ ಮತ್ತು ‘ಇಂಡಸ್ ಟವರ್ಸ್’ ಸಂಸ್ಥೆಗಳು ಜಂಟಿಯಾಗಿ 175 ರೈಲ್ವೆ ನಿಲ್ದಾಣಗಳಲ್ಲಿ ಬರೋಬ್ಬರಿ 500 ಐಒಟಿ-ಚಾಲಿತ ವೆಂಡಿಂಗ್ ಯಂತ್ರಗಳನ್ನು ಸ್ಥಾಪಿಸಿವೆ. ಇವುಗಳ ಮೂಲಕ ಉಚಿತವಾಗಿ ಸ್ಯಾನಿಟರಿ ಪ್ಯಾಡ್ಗಳನ್ನು ವಿತರಿಸಲಾಗುತ್ತಿದೆ. ದೆಹಲಿ, ಫಿರೋಜ್ಪುರ, ಅಂಬಾಲಾ, ಮೊರಾದಾಬಾದ್ ಮತ್ತು ಲಕ್ನೋ ರೈಲ್ವೆ ವಿಭಾಗಗಳಲ್ಲಿ ಈ ಸೌಲಭ್ಯ ಲಭ್ಯವಿದೆ.
ಮುಂಬೈನ ಪ್ರಮುಖ ಉಪನಗರ ಮತ್ತು ಜನನಿಬಿಡ ರೈಲ್ವೆ ನಿಲ್ದಾಣಗಳಲ್ಲಿ ‘ನಿಯರ್ ಅಮಯಾ’ ಎನ್ಜಿಒ ಮತ್ತು ಸಿಸಿಐಎಲ್ ಸಹಯೋಗದೊಂದಿಗೆ ಮಹಿಳಾ ಶೌಚಾಲಯಗಳ ಒಳಗಡೆಯೇ ಸ್ಯಾನಿಟರಿ ವೆಂಡಿಂಗ್ ಯಂತ್ರಗಳು ಮತ್ತು ಅವುಗಳ ವಿಲೇವಾರಿ ಬಿನ್ಗಳನ್ನು ಅಳವಡಿಸಲಾಗಿದೆ.