ಮುಂಬೈ, ಜೂ. 24 (DaijiworldNews/TA): ಮುಂಗಾರು ಮಳೆಯ ಅಬ್ಬರದಿಂದ ಜಲಾವೃತಗೊಂಡಿರುವ ಮುಂಬೈನಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆಯ ನಿರ್ಲಕ್ಷ್ಯವನ್ನು ಬಯಲಿಗೆಳೆದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜಲಾವೃತಗೊಂಡ ಪ್ರದೇಶಗಳ ಪರಿಶೀಲನೆ ನಡೆಸುತ್ತಿದ್ದ ವೇಳೆ ಮುಂಬೈ ಮೇಯರ್ ರಿತು ತಾವ್ಡೆ ಅವರ ಕಣ್ಣೆದುರೇ ಪೌರಕಾರ್ಮಿಕರೊಬ್ಬರು ತೆರೆದಿದ್ದ ಮ್ಯಾನ್ಹೋಲ್ಗೆ ಬಿದ್ದ ಘಟನೆ ನಡೆದಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಎಂಸಿ ಆಡಳಿತದ ವಿರುದ್ಧ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬೈನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಹಲವು ರಸ್ತೆಗಳಲ್ಲಿ ಮೂರರಿಂದ ನಾಲ್ಕು ಅಡಿ ಎತ್ತರದವರೆಗೆ ನೀರು ನಿಂತಿದೆ. ಈ ಹಿನ್ನೆಲೆಯಲ್ಲಿ ಮೇಯರ್ ರಿತು ತಾವ್ಡೆ ಅವರು ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಜಲಾವೃತ ಪ್ರದೇಶಗಳ ಪರಿಶೀಲನೆ ನಡೆಸುತ್ತಿದ್ದರು.
ಪರಿಶೀಲನೆ ನಡೆಯುತ್ತಿದ್ದ ಸ್ಥಳದಲ್ಲೇ ರಸ್ತೆಯಲ್ಲಿದ್ದ ಮ್ಯಾನ್ಹೋಲ್ ಮುಚ್ಚಳವನ್ನು ತೆರವುಗೊಳಿಸಲಾಗಿತ್ತು. ಆದರೆ ರಸ್ತೆಯ ಮೇಲೆ ನೀರು ತುಂಬಿಕೊಂಡಿದ್ದರಿಂದ ಅದು ಕಾಣಿಸುತ್ತಿರಲಿಲ್ಲ. ಇದೇ ವೇಳೆ ರಸ್ತೆ ದಾಟುತ್ತಿದ್ದ ಪೌರಕಾರ್ಮಿಕರೊಬ್ಬರು ಮ್ಯಾನ್ಹೋಲ್ ಇರುವುದನ್ನು ಗಮನಿಸದೆ ನೇರವಾಗಿ ಅದರೊಳಗೆ ಬಿದ್ದಿದ್ದಾರೆ.
ಪೌರಕಾರ್ಮಿಕರು ಮ್ಯಾನ್ಹೋಲ್ಗೆ ಬೀಳುತ್ತಿದ್ದಂತೆ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ, ಮಾಧ್ಯಮದ ಕ್ಯಾಮೆರಾಮೆನ್ಗಳು ಹಾಗೂ ಸ್ಥಳೀಯರು ತಕ್ಷಣವೇ ಧಾವಿಸಿ ಅವರನ್ನು ಸುರಕ್ಷಿತವಾಗಿ ಮೇಲಕ್ಕೆ ಎಳೆದಿದ್ದಾರೆ. ಸಮಯಪ್ರಜ್ಞೆಯಿಂದ ನಡೆದ ರಕ್ಷಣಾ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತ ತಪ್ಪಿದೆ. ಘಟನೆಯ ನಂತರ ಅಧಿಕಾರಿಗಳು ಎಚ್ಚೆತ್ತುಕೊಂಡು ಮ್ಯಾನ್ಹೋಲ್ ಸುತ್ತ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದು, ಸಾರ್ವಜನಿಕರ ಸುರಕ್ಷತೆಗೆ ಕ್ರಮ ಕೈಗೊಂಡಿದ್ದಾರೆ.