ಜೈಪುರ್, ಜೂ. 24 (DaijiworldNews/AA): ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ನೊಂದಿಗೆ ಸಂಪರ್ಕ ಹೊಂದಿರುವ ಸಂಶಯದ ಮೇರೆಗೆ ರಾಜಸ್ಥಾನ ಮೂಲದ ಮಹಿಳೆಯೊಬ್ಬಳನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತ ಮಹಿಳೆಯನ್ನು ಸವಾಯಿ ಮಾಧೋಪುರ ಜಿಲ್ಲೆಯ ಬಬಿತಾ ಧಾಕಡ್ ಅಲಿಯಾಸ್ ಖದೀಜಾ ಎಂದು ಗುರುತಿಸಿದೆ.
ಪ್ರಸ್ತುತ ಬಂಧಿತ ಮಹಿಳೆಯು ಜೈಪುರ್ನ ವಟಿಕಾ ಪ್ರದೇಶದಲ್ಲಿ ನಿವೃತ್ತ ತಂದೆಯೊಂದಿಗೆ ವಾಸಿಸುತ್ತಿದ್ದಳು. ಹಲವು ವರ್ಷಗಳ ಹಿಂದೆ ಗಂಡನಿಂದ ಬೇರ್ಪಟ್ಟು ಒಂಟಿಯಾಗಿ ಜೀವನ ನಡೆಸುತ್ತಿದ್ದಳು. ಗುಪ್ತಚರ ಮಾಹಿತಿಯ ಆಧಾರದಲ್ಲಿ ಆಕೆಯನ್ನು ಬಂಧಿಸಿದೆ.
ಬಬಿತಾ ಧಾಕಡ್ ವಾಟ್ಸಾಪ್ ಮತ್ತು ಇತರ ಸಾಮಾಜಿಕ ಮಾಧ್ಯಮ ಖಾತೆಗಳು ಪಾಕಿಸ್ತಾನದಿಂದ ನಿಯಂತ್ರಣಕ್ಕೆ ಒಳಗಾಗಿದ್ದವು. ಆಕೆಯ ಸಿಮ್ನ್ನು ಸಂಘಟನೆ ಜೊತೆಗೆ ಹಂಚಿಕೊಂಡಿದ್ದಳು. ಜೈಪುರ್ನ ವಿವಿಧ ಸ್ಥಳಗಳಿಗೆ ಆಕೆ ಪ್ರಯಾಣಿಸಿದ್ದಳು ಎಂದು ತನಿಖೆ ವೇಳೆ ಬಹಿರಂಗಗೊಂಡಿದೆ. ಆಕೆ ಪಾಕಿಸ್ತಾನದ ಬಹಾವಲ್ಪುರ್ನಿಂದ ಕಾರ್ಯನಿರ್ವಹಿಸುತ್ತಿದ್ದ ಜೈಶ್ ಹ್ಯಾಂಡ್ಲರ್ಗಳೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡಿದ್ದಳು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಪಾಕಿಸ್ತಾನದ ಒಬ್ಬ ಮೌಲವಿಯ ಪ್ರಭಾವಕ್ಕೆ ಒಳಗಾಗಿ ತಾನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ. ಕೆಲವು ವ್ಯಕ್ತಿಗಳು ತನ್ನನ್ನು ಪಾಕಿಸ್ತಾನಕ್ಕೆ ಕರೆದೊಯ್ಯುವ ವ್ಯವಸ್ಥೆ ಮಾಡುವುದಾಗಿ ಚರ್ಚಿಸಿದ್ದರು ಎಂದು ಬಂಧಿತ ಮಹಿಳೆ ವಿಚಾರಣೆ ವೇಳೆ ತಿಳಿಸಿದ್ದಾರೆ.
ಇನ್ನು ಯುಎಪಿಎ ಕಾನೂನು ಮತ್ತು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆಕೆಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ಜೂನ್ 27ರ ವರೆಗೆ ಎಟಿಎಸ್ ಕಸ್ಟಡಿಗೆ ನೀಡಿದೆ.